ಶಿಗ್ಗಾಂವಿ(ಗ್ರಾ): ಜೈನ ತೀರ್ಥಂಕರರು ಈಡಿ ಜಗತ್ತಿಗೆ ಅಧ್ಯಾತ್ಮದ ಸಾಧನೆಯನ್ನು ಸಮರ್ಪಿಸಿದ್ದಾರೆ. ತ್ಯಾಗದ ಆಧಾರದ ಮೇಲೆ ಹುಟ್ಟಿರುವ ಜೈನ ಧರ್ಮದ ಆಚರಣೆ ಮಾಡುವುದು ತುಂಬ ಕಷ್ಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಭಗವಾನ್ ಶ್ರೀ 1008 ಆದಿನಾಥ ತೀರ್ಥಂಕರರ ನೂತನ ಜಿನಮಂದಿರದ ಧಾಮಸಂಪ್ರೋಕ್ಷಣ ಹಾಗೂ ಮಾನಸ್ತಂಭೋಪರಿ ಚತುಮುಖ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಮಪೂಜ್ಯರು ನುಡಿಯುವ ಪ್ರತಿಯೊಂದು ಮಾತು ಸತ್ಯ ಆಗುತ್ತದೆ. ಪೂಜ್ಯರು ಸದಾಕಾಲ ನನಗೆ ಆಶೀರ್ವಾದ ಮಾಡುತ್ತಿದ್ದಾರೆ.
ಧರ್ಮ ಜೈನ ಧರ್ಮವು ಬಸವಣ್ಣನವರು ಹೇಳಿದ ಸಕಲ ಜೀವಗಳಿಗೆ ಲೇಸನ್ನು ಬಯಸುತ್ತಿದೆ. ಯಾವುದೇ ಕಾಯಕ ಮಾಡಿದರೂ ಜೈನ ಧರ್ಮದವರು ನಿಷ್ಠೆಯಿಂದ ಮಾಡುತ್ತಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದ ವರೆಗೆ ಜೈನ ಧರ್ಮ ಪಸರಿಸಿದೆ. ಪುಣ್ಯಸಾಗರ ಮಹಾರಾಜರು ಬರೆದಿರುವ ತತ್ವಾರ್ಥ ಸೂತ್ರ ಪುಸ್ತಕವನ್ನು ಓದಿ ಅದನ್ನು ನನ್ನ ಜಗಲಿ ಮನೆ ಮೇಲೆ ಇಟ್ಟಿದ್ದೇನೆ ಎಂದರು.
ಕಿರಣ ಅವರಾದಿ ಮಾತನಾಡಿ, ಜೈನ ಸಮುದಾಯ ಮತ್ತು ಬಸದಿಗಳ ನಿರ್ವಣಕ್ಕೆ ಮುಖ್ಯಮಂತ್ರಿಗಳು ದೊಡ್ಡ ಮೊತ್ತದ ಅನುದಾನ ನೀಡಿದ್ದಾರೆ. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕೈ ಬಲಪಡಿಸುತ್ತೇವೆ ಎಂದರು.
ಶ್ರೀ ಅಭಿಷ್ಠಾಜ್ಞಾನಭಾಸ್ಕರ 108 ಪುಣ್ಯ ಸಾಗರ ಮಹಾರಾಜರು, ಮುನಿಮಹಾರಾಜರು. ಶ್ರೀಕಾಂತ ದುಂಡಿಗೌಡ್ರ, ಜಯದೇವ ಅಗಡಿ. ಎನ್. ಸಿ. ಪಾಟೀಲ, ತಿಪ್ಪಣ್ಣ ಸಾತಣ್ಣವರ, ದೇವಣ್ಣ ಚಾಕಲಬ್ಬಿ, ಎನ್. ಎಂ. ವೆಂಕೋಜಿ, ಹನುಮರೆಡ್ಡಿ ನಡುವಿನಮನಿ, ಶಿವಾನಂದ ಮ್ಯಾಗೇರಿ, ಮಹಾವೀರ ಕೊಳೂರ ಇತರರು ಇದ್ದರು.
ಸಮಾರಂಭದಲ್ಲಿ ಜೈನ ದಿಗಂಬರ ಪ್ರತ್ಯೇಕ ನಿಗಮಕ್ಕಾಗಿ ಮುಖ್ಯಮಂತ್ರಿಗಳಿಗೆ ಕುನ್ನೂರ ಜೈನ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.