ತೂಬಗೆರೆ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತುಂಬಿ, ಕೋಡಿ ಬಿದ್ದಿರುವ ಜಕ್ಕಲಮಡು ಜಲಾಶಯಕ್ಕೆ ತಾಲೂಕು ಕಲಾವಿದರ ಸಂಘ ಭಜನೆ, ಸಂಕೀರ್ತನೆಯೊಂದಿಗೆ ಬಾಗಿನ ಸಮರ್ಪಿಸಿತು.
ತಾಲೂಕು ಕಲಾವಿದರ ಸಂಘದ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಹೊರಟ ಕಲಾವಿದರು, ತೂಬಗೆರೆ ಗ್ರಾಮದಲ್ಲಿ ಬಾಗಿನ ಪರಿಕರಗಳಿಗೆ ಪೂಜೆ ಸಲ್ಲಿಸಿ, ಭಜನೆ ಸಂಕೀರ್ತನೆ ನಡೆಸಿದರು. ಬಳಿಕ ಗ್ರಾಮದಲ್ಲಿ ಮೆರವಣಿಗೆ ಮಾಡಿ, ಜಲಾಶಯಕ್ಕೆ ಕೊಂಡೊಯ್ದರು.
ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜು ಮಾತನಾಡಿ, ತೂಬಗೆರೆ ಹೋಬಳಿಯಲ್ಲಿ ನೀರಿಗೆ ಇಂದಿಗೂ ಬರವಿದೆ. ಸಾವಿರಾರು ಅಡಿ ಕೊಳವೆಬಾಗಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದರೆ ಈ ವರ್ಷ ಹೋಬಳಿಯಲ್ಲಿ ಉತ್ತಮ ಮಳೆ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಕ್ಕಲಮಡು ಜಲಾಶಯ ನಿರ್ಮಾಣ ಯೋಜನೆಯ ಹರಿಕಾರ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಶ್ರಮ ಸ್ಮರಣೀಯ. ಅಣೆಕಟ್ಟನ್ನು ಎತ್ತರಿಸಿ, ತೂಬಗೆರೆ ಭಾಗದ ಕೆರೆ, ಕುಂಟೆಗಳನ್ನು ತುಂಬುವಂತೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್. ರಾಮಾಂಜಿನಪ್ಪ ಮಾತನಾಡಿ, ಜಕ್ಕಲಮಡು ಜಲಾಶಯದಲ್ಲಿ ನೀರು ಇಲ್ಲವಾಗಿದ್ದರೆ, ದೊಡ್ಡಬಳ್ಳಾಪುರ ನಗರದಲ್ಲಿ ನೀರಿಗೆ ಹಾಹಾಕಾರ ಏಳುತ್ತಿತ್ತು. ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಎರಡೂ ನಗರಗಳಿಗೆ ಈ ಜಲಾಶಯ ನೀರುಣಿಸುತ್ತಿದೆ. ಜಲಾಶಯಕ್ಕೆ ಮೂರನೇ ಬಾರಿ ಬಾಗಿನ ಅರ್ಪಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಶೇಖರ್, ಉಪಾಧ್ಯಕ್ಷರಾದ ಜಿ. ಮುನಿರಾಜು, ಕೆ. ನರಸಿಂಹಯ್ಯ, ಗ್ರಾಪಂ ಅಧ್ಯಕ್ಷ ಸುರೇಶ್ ಬಾಬು, ಸದಸ್ಯ ರವಿ ಸಿದ್ದಪ್ಪ, ಜಿಪಂ ಮಾಜಿ ಸದಸ್ಯ ಅರವಿಂದ್, ಕಲಾವಿದರಾದ ಎಂ. ವೆಂಕಟರಾಜು, ಹೋಟೆಲ್ ವೆಂಕಟೇಶ್, ತಮ್ಮಣ್ಣ, ನಾಟಕ ನಿರ್ದೇಶಕ ಟಿ.ವಿ.ಕೃಷ್ಣಪ್ಪ, ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಡಿ. ಶ್ರೀಕಾಂತ್ ಮತ್ತಿತರರಿದ್ದರು.