ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಅರಮನೆ ಆವರಣದಲ್ಲಿ ಪೂರ್ಣ ಪ್ರಮಾಣದ ಜಂಬೂಸವಾರಿ ತಾಲೀಮು ಯಶಸ್ವಿಯಾಗಿ ನಡೆಯಿತು.
ಇದುವರೆಗೆ ದಸರಾ ಗಜಪಡೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಭಾರ ಹೊರುವ ತಾಲೀಮು ನಡೆಸಿತ್ತು. ಪ್ರಥಮ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿ, ಅಶ್ವರೋಹಿದಳ, ಪೊಲೀಸ್ ಬ್ಯಾಂಡ್ ತಂಡಗಳು ಒಟ್ಟಿಗೆ ಸೇರಿ ಪೂರ್ಣ ಪ್ರಮಾಣದ ತಾಲೀಮು ನಡೆಸಿತು.
ಅ.12 ರಂದು ದಸರಾ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಅಂದು ಮಧ್ಯಾಹ್ನ 1.41ರಿಂದ 2.10ರ ಅವಧಿಯಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಆ ನಂತರ ಸಂಜೆ 4 ರಿಂದ 4.30ರ ಅವಧಿಯ ಶುಭ ಕುಂಭ ಲಗ್ನದಲ್ಲಿ ಅಂಬಾರಿ ಆನೆ ಅಭಿಮನ್ಯು ಹೊರುವ ಅಂಬಾರಿಯಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಜಂಬೂಸವಾರಿ ಮೆರವಣಿಗೆ ಪ್ರಾರಂಭಗೊಳ್ಳಲಿದೆ.
ಈ ಮೆರವಣಿಗೆಯು ಕ್ರಮಬದ್ಧವಾಗಿ ನಡೆಸುವ ಉದ್ದೇಶದಿಂದ ಬುಧವಾರ ತಾಲೀಮು ನಡೆಸಲಾಯಿತು. ನಿಶಾನೆ, ನೌಫತ್ ಹಾಗೂ ಸಾಲಾನೆಗಳು ಯಾವಾಗ ಸಾಗಬೇಕು? ಕಲಾ ತಂಡಗಳು ಯಾವಾಗ ಹೊರಡಬೇಕು? ಪೊಲೀಸ್ ತುಕಡಿ, ಪೊಲೀಸ್ ಬ್ಯಾಂಡ್, ಅಂಬಾರಿ ಆನೆ ಯಾವಾಗ ಹೊರಡಬೇಕು ಎಂಬ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದೆ ಜಂಬೂಸವಾರಿ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ತಾಲೀಮು ನಡೆಸಲಾಯಿತು.
ನಗರಕ್ಕೆ 14 ಆನೆಗಳು ಆಗಮಿಸಿದ್ದರೂ ಜಂಬೂಸವಾರಿ ಮೆರವಣಿಗೆಯಲ್ಲಿ 9 ಆನೆಗಳು ಮಾತ್ರ ಪಾಲ್ಗೊಳ್ಳುತ್ತವೆ. ಆದರೆ, ಇಂದು ತಾಲೀಮು ಕಾರಣಕೋಸ್ಕರ ಹಿರಿಯ ಆನೆ ವರಲಕ್ಷ್ಮಿಯನ್ನು ಹೊರತು ಪಡಿಸಿ ಉಳಿದ 13 ಆನೆಗಳು ಭಾಗವಹಿಸಿತ್ತು. ನಿಶಾನೆ ಆನೆಯಾಗಿ ಧನಂಜಯ, ನೌಫತ್‌ಯಾಗಿ ಗೋಪಿ ಕಾರ್ಯ ನಿರ್ವಹಿಸಿತು. ಆ ನಂತರ ಪೊಲೀಸ್ ತುಕಡಿ ಸಾಗಿತು. ಅಂತಿಮವಾಗಿ ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ನಡೆಯುವ ಸ್ಥಳಕ್ಕೆ ಅಂಬಾರಿ ಆನೆ ಅಭಿಮನ್ಯು ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ಹಿರಣ್ಯ ಜತೆಗೆ ಆಗಮಿಸಿತು.
ಈ ವೇಳೆ ಪೆರೇಡ್ ಕಮಾಂಡರ್, ಅಶ್ವರೋಹಿದಳ ಕಮಾಂಡೆಂಟ್ ವಿ.ಶೈಲೇಂದ್ರ ಕುದುರೆಯಲ್ಲಿ ಬಂದು ಪೆರೇಡ್ ಆರಂಭಕ್ಕೆ ಗಣ್ಯರ ಅನುಮತಿ ಕೇಳಿದರು. ಅನುಮತಿ ದೊರೆಯುತ್ತಿದ್ದಂತೆಯೇ ರಾಷ್ಟ್ರಗೀತೆ ಪ್ರಾರಂಭಗೊಂಡಿತು. ಈ ಸಂದಭ ವೇದಿಕೆ ಮೇಲಿದ್ದ ಶಾಸಕ ಟಿ.ಎಸ್.ಶ್ರೀವತ್ಸ, ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಅಶೋಕ್(ಸಿಎಆರ್), ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್ ಅಂಬಾರಿ ಆನೆ ಅಭಿಮನ್ಯುವಿಗೆ ಪುಷ್ಪಾರ್ಚನೆ ನೆರವೇರಿಸಿದರು.
ಈ ಸಂದರ್ಭ ಕೋಟೆ ಮಾರಮ್ಮ ದೇವಸ್ಥಾನ ಆವರಣದಲ್ಲಿ 7 ಫಿರಂಗಿಗಳಲ್ಲಿ ತಲಾ ಮೂರು ಸುತ್ತಿನಂತೆ 21 ಬಾರಿ ಕುಶಾಲುತೋಪು ಸಿಡಿಸಲಾಯಿತು. ರಾಷ್ಟ್ರಗೀತೆ ನುಡಿಸುತ್ತಿದ್ದಂತೆಯೇ ಅಭಿಮನ್ಯು ಸೊಂಡಿಲೆತ್ತಿ ಸೆಲ್ಯುಟ್ ಹೊಡೆಯಿತು. ಸಮವಸ್ತ್ರ ಧರಿಸಿದ್ದ ಪೊಲೀಸ್ ಅಧಿಕಾರಿಗಳು, ಅರಣ್ಯ ಸಿಬ್ಬಂದಿಗಳು ಸೆಲ್ಯೂಟ್ ಹೊಡೆದು ರಾಷ್ಟ್ರಗೀತೆಗೆ ಗೌರವ ಸಮರ್ಪಿಸಿತು.
ನಂತರ ಪೊಲೀಸ್ ಬ್ಯಾಂಡ್ ವಾದನಕ್ಕೆ ಅನುಗುಣವಾಗಿ ಪೊಲೀಸ್ ತುಕಡಿಗಳು ಆಕರ್ಷಕ ಪಥಸಂಚಲನದಲ್ಲಿ ಸಾಗಿತು. ಅಶ್ವರೋಹಿ ತಂಡ ಹಿಂಬಾಲಿಸಿತು. ಅಂತಿಮವಾಗಿ ಅಂಬಾರಿ ಆನೆ ಅಭಿಮನ್ಯು ಕುಮ್ಕಿ ಆನೆಯೊಂದಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿತು. ಮೆರವಣಿಗೆಯು ಅರಮನೆ ಆವರಣದಲ್ಲಿ ಪ್ರಾರಂಭಗೊಂಡು ಬಲರಾಮ ದ್ವಾರದ ಬಳಿ ಅಂತ್ಯಗೊಂಡಿತು.
ಧೈರ್ಯ ತೋರಿದ ಹಿರಣ್ಯ: ಕುಶಾಲುತೋಪು ತಾಲೀಮು ಹಾಗೂ ಶ್ರೀರಂಗಪಟ್ಟಣ ದಸರಾ ಸಂದರ್ಭ ಹಿರಣ್ಯ ಹೆಣ್ಣಾನೆಯು ಗಾಬರಿಗೊಂಡಿತ್ತು. ಆದರೆ, ಬುಧವಾರ ಹಮ್ಮಿಕೊಂಡಿದ್ದ ಜಂಬೂಸವಾರಿ ತಾಲೀಮು ಸಂದರ್ಭ ಕುಶಾಲುತೋಪು ಸಿಡಿಸುವ ಸಂದರ್ಭ ಸಣ್ಣ ಪ್ರಮಾಣದಲ್ಲಿ ಬೆಚ್ಚಿದರೂ ನಂತರ ಶಬ್ದಕ್ಕೆ ಹೊಂದಿಕೊಂಡು ಧೈರ್ಯವಾಗಿ ಹೆಜ್ಜೆ ಹಾಕಿತು.
ದಸರಾ ಜಂಬೂಸವಾರಿ ಮೆರವಣಿಗೆಯ ಮೊದಲ ತಾಲೀಮು ಯಶಸ್ವಿಯಾಗಿ ನಡೆದಿದೆ. ಎಲ್ಲ ಆನೆಗಳು ಹಾಗೂ ಕುದುರೆಗಳು ಯಾವುದೇ ಆತಂಕ ಇಲ್ಲದೆ ಪಾಲ್ಗೊಂಡಿವೆ. ಸಿಡಿಮದ್ದು ಸಿಡಿಸುವ ಸಂದರ್ಭ ಆನೆಗಳ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಆನೆಗಳು ಸಿಡಿಮದ್ದಿನ ಶಬ್ದಕ್ಕೆ ಹೊಂದಿಕೊಂಡಿವೆ.
ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್, ವನ್ಯಜೀವಿ ವಿಭಾಗ