ಬಳ್ಳಾರಿ : ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಪ್ರತಿ 06 ತಿಂಗಳಿಗೊಮ್ಮೆ ತಪ್ಪದೇ 2 ರಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆಗಳನ್ನು ಪಾಲಕರು ಕೊಡಿಸಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶ್ಬಾಬು ಹೇಳಿದರು.
ಇಲ್ಲಿನ ಬ್ರೂಸ್‌ಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಸೋಮವಾರ ನಡೆದ ಸಮುದಾಯ ಆಧಾರಿತ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಬೆಳವಣಿಗೆಯ ಆರಂಭದಲ್ಲಿಯೇ ರಕ್ತಹೀನತೆಯನ್ನು ಗುರುತಿಸುವುದರಿಂದ ದೇಹದ ಬೆಳವಣಿಗೆಗೆ ಆಗುವ ಕುಂಠಿತ ಹಾಗೂ ಇತರೆ ಸಾಮಾನ್ಯ ತೊಂದರೆಗಳನ್ನು ಗುರುತಿಸಿ ಮಗುವಿನ ಬಾಲ್ಯವನ್ನು ಸದೃಢಗೊಳಿಸಲು ಜಂತುಹುಳು ಮಾತ್ರೆಗಳನ್ನು ಮಗುವಿಗೆ ಚೀಪಿಸಲು ಕೊಡಬೇಕು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಎಲ್ಲಾ ಪಾಲಕರು ಇದರ ಸದುಪಯೋಗ ಪಡೆದುಕೊಂಡು ಮಗುವಿನ ಸದೃಢ ಆರೋಗ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಮಾತ್ರೆಗಳನ್ನು ವಿತರಿಸಲು ತಂಡಗಳನ್ನು ರಚಿಸಲಾಗಿದೆ. ಕ್ಷೇತ್ರ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ವೈದ್ಯಕೀಯ ತಂಡವು ಜಿಲ್ಲೆಯ ಪ್ರತಿ ಮನೆ ಮನೆಯ ಭೇಟಿಯ ಮೂಲಕ 4,05,388 ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು ಮಕ್ಕಳಿಗೆ ಮನೆಗಳಲ್ಲಿಯೇ ವಿತರಿಸಲಿದ್ದು, ಮಗುವಿಗೆ ಯಾವುದೇ ಕಾರಣಕ್ಕೂ ನುಂಗಿಸದೇ ಮಾತ್ರೆಗಳನ್ನು ಚೀಪಿಸಲು ತಿಳಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಚೈತ್ರಾ, ಸುನಿತಾ, ಪಲ್ಲವಿ ನಾಯ್ಕ, ಅರುಣಾ ಜ್ಯೋತಿ, ಎಸ್. ತುಳಸಿ ಇದ್ದರು.