ಜಿಲ್ಲೆ

ಜಂಟಿ ಸಮೀಕ್ಷೆ ನಡೆಸಿ ಕಾಯ್ದೆ ಅನುಷ್ಠಾನಗೊಳಿಸಿ

ಧಾರವಾಡ: ಜಿಲ್ಲೆಯ ಕಲ್ಲು ಪುಡಿ ಮಾಡುವ ಘಟಕಗಳು (ಕ್ರಷರ್) ಹಾಗೂ ಸುರಕ್ಷಾ ವಲಯಗಳ ಪಾಲನೆ, ಲೈಸೆನ್ಸ್​ಗಳ ನವೀಕರಣ, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ವೇಳೆ ಕಂದಾಯ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಭೂ ದಾಖಲೆಗಳ ಕಚೇರಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಕಾಯ್ದೆಯ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಬುಧವಾರ ಜರುಗಿದ ಜಿಲ್ಲಾ ಮಟ್ಟದ ಸುರಕ್ಷಾ ವಲಯ ಹಾಗೂ ಗಣಿ ಟಾಸ್ಕ್​ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ರಷರ್ ಮತ್ತು ಗಣಿ ಗುತ್ತಿಗೆದಾರರು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಎದುರಾಗುತ್ತಿರುವ ತೊಂದರೆ ನಿವಾರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳ ಜಂಟಿ ಸಮೀಕ್ಷೆ ಸಂದರ್ಭದಲ್ಲೇ ದಾಖಲೆಗಳನ್ನು ಕ್ರೋಡೀಕರಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಚಾಲ್ತಿ್ತುಲ್ಲಿರುವ 56 ಕ್ರಷರ್ ಘಟಕಗಳ ಲೈಸೆನ್ಸ್ ಅವಧಿಯನ್ನು ಮೂಲ ಲೈಸೆನ್ಸ್ ಜಾರಿಯಾದ ದಿನಾಂಕದಿಂದ 20 ವರ್ಷಗಳ ಅವಧಿಗೆ ವಿಸ್ತರಿಸಲು ಒಪ್ಪಿಗೆ ನೀಡಲಾಯಿತು. ನವೀಕರಣಕ್ಕೆ ಸ್ವೀಕೃತಿಯಾದ 7 ಕ್ರಷರ್ ಘಟಕಗಳ ಅರ್ಜಿಗಳ ಪೈಕಿ 6 ಅರ್ಜಿಗಳನ್ನು ನವೀಕರಿಸಲು ಸಭೆ ನಿರ್ಧರಿಸಿತು. ಒಬ್ಬ ಅರ್ಜಿದಾರ ಮರಣ ಹೊಂದಿರುವುದರಿಂದ ವಾರಸುದಾರರ ವಿವರ ಕಾನೂನಾತ್ಮಕವಾಗಿ ಲಭ್ಯವಾದ ನಂತರ ನವೀಕರಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ಅಭಿಪ್ರಾಯದಂತೆ ಸರ್ಕಾರಿ ಜಮೀನಿನಲ್ಲಿ ನೂತನ ಜಲ್ಲಿ ಕಲ್ಲು ಕ್ರಷರ್ ಘಟಕ ಸ್ಥಾಪನೆಗೆ ಭೂ ಬಾಡಿಗೆ ನಿಗದಿಪಡಿಸಲು ರ್ಚಚಿಸಲಾಯಿತು.

ಜಿ.ಪಂ. ಸಿಇಒ ಡಾ. ಬಿ. ಸುಶೀಲಾ, ಎಸ್​ಪಿ ಕೃಷ್ಣಕಾಂತ ಇದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ. ಚಂದ್ರಶೇಖರ ನಿರ್ವಹಿಸಿದರು. ಭೂವಿಜ್ಞಾನಿ ಮಹೇಶ ಗೌಡನಾಯ್ಕರ, ಜಿಲ್ಲಾ ಪರಿಸರ ಅಧಿಕಾರಿ ಶೋಭಾ ಪೋಳ, ತಹಸೀಲ್ದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯ 6 ಕಡೆ ಸ್ಧಾಪಿಸಲಾಗಿರುವ 6 ತಾತ್ಕಾಲಿಕ ಕಂಟೈನರ್ ಮಾದರಿ ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರವ 40 ಗೃಹರಕ್ಷಕ ದಳದ ಸಿಬ್ಬಂದಿಗೆ ಬಾಕಿ ಇರುವ 4 ತಿಂಗಳ ಕರ್ತವ್ಯ ಭತ್ಯೆಯನ್ನು ಜಿಲ್ಲೆಯ ಡಿಎಂಎಫ್ ನಿಧಿಯಿಂದ ಪಾವತಿಸಬೇಕು.| ನಿತೇಶ ಪಾಟೀಲ, ಜಿಲ್ಲಾಧಿಕಾರಿ