ಜಿಲ್ಲೆ

ಜಂಗಮರು ಶೈಕ್ಷಣಿಕ ಪ್ರಗತಿ ಸಾಧಿಸಲಿ

ಹೊಸದುರ್ಗ:ಉತ್ತಮ ಸಂಸ್ಕೃತಿ, ಸಂಸ್ಕಾರ ಹೊಂದಿರುವ ಜಂಗಮ ಸಮುದಾಯ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ ಪಟ್ಟಣದ ಜಂಗಮ ನಗರದಲ್ಲಿ ಶನಿವಾರ ಆಯೋಜಿಸಿದ್ದ ಜಂಗಮ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಂಗಮ ಸಮಾಜ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸ್ವಾಭಿಮಾನದಿಂದ ಬದುಕುವ ಮೂಲಕ ಮಾದರಿಯಾಗಿದೆ. ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿ ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ಮಕ್ಕಳಲ್ಲಿ ಸಾಧನೆ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದರೆ ಭವಿಷ್ಯದ ಬದುಕು ಸುಂದರವಾಗಿರುತ್ತದೆ ಎಂದರು.

ಜಂಗಮ ಸಮುದಾಯದ ಅಭಿವೃದ್ಧಿಗಾಗಿ ಅಗತ್ಯ ನೆರವು ನೀಡುತ್ತೇನೆ. ಸಮುದಾಯದ ಮೇಲೆ ತುಂಬಾ ಪ್ರೀತಿ, ಅಭಿಮಾನವಿದೆ. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ದೊರಕಿಸಿ ಕೊಡಲು ಬದ್ಧನಾಗಿದ್ದೇನೆ. ಸಮಾಜದವರು ಸರ್ಕಾರದ ಸೌಲಭ್ಯ ಪಡೆದು ಸಬಲೀಕರಣ ಸಾಧಿಸಬೇಕು ಎಂದು ಹೇಳಿದರು.

ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಕಲ್ಮಠ್ ಮಾತನಾಡಿ, ನಾಲ್ಕನೇ ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಿ.ಜಿ.ಗೋವಿಂದಪ್ಪ ಅವರು ನೀರಾವರಿ ಸೌಲಭ್ಯ ಕಲ್ಪಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಅದರಂತೆ ತಾಲೂಕಿನ ಯುವಕರಿಗೆ ಉದ್ಯೋಗ ದೊರಕಿಸುವ ಕೆಲಸಕ್ಕೆ ಹೆಚ್ಚು ಅದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಜಂಗಮ ಸಮಾಜದ ಅಭಿವೃದ್ಧಿಗೆ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ ಶ್ರಮಿಸಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಜಂಗಮ ನಗರ ಬಡಾವಣೆಯಲ್ಲಿ ಸಮಾಜಕ್ಕಾಗಿ ಎರಡು ಪ್ರತ್ಯೇಕ ಹಾಸ್ಟೆಲ್ ಕಟ್ಟಡ ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಸಂಘದ ಚಟುವಟಿಕೆಯಲ್ಲಿ ಯುವ ಸಮುದಾಯ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ಪ್ರತಿವರ್ಷ ಶೈಕ್ಷಣಿಕ ಪ್ರಗತಿ ಸಾಧಿಸಿದವರನ್ನು ಅಭಿನಂದಿಸಲಾಗುತ್ತಿದೆ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಮುಖಂಡರಾದ ಎಂ.ಬಿ.ತಿಪ್ಪೇಸ್ವಾಮಿ, ಚಂದ್ರಶೇಖರಯ್ಯ, ನೀಲಕಂಠಯ್ಯ, ಷಡಾಕ್ಷರಯ್ಯ, ಕುಮಾರಸ್ವಾಮಿ, ನಾಗಲಿಂಗಮೂರ್ತಿ, ಪರಣ್ಣ ಇತರರಿದ್ದರು.