oppo_2 
ಜಿಲ್ಲೆ

ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ

ಕಲಬುರಗಿ: ರಾಜ್ಯದಲ್ಲಿ ಜಂಗಮ ಸಮಾಜವು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಪ್ರಗತಿಗೆ ಪ್ರಸಕ್ತ ಬಜೆಟ್‌ನಲ್ಲಿ ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ, ಹಣ ನೀಡಬೇಕು ಎಂದು ಜಂಗಮ ಸಮಾಜ ಕ್ಷೇಮಾಭಿವೃದ್ಧಿಪರ ಸಂಘದ ಅಧ್ಯಕ್ಷ ಸತೀಶ ಡಿಗ್ಗಾಂವಕರ್ ಹೇಳಿದರು.

ವೀರಶೈವ ಲಿಂಗಾಯತ ಪರಂಪರೆಯ ಜಂಗಮ ಸಮುದಾಯದವರು ಪೂಜೆ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಸಾಮಾಜಿಕ ಗೌರವ, ಮನ್ನಣೆ ಪಡೆದಿದ್ದರೂ ಸಹ ಆರ್ಥಿಕವಾಗಿ ತೀರ ಹಿಂದುಳಿದಿದೆ. ಕಾಲ ಬದಲಾದಂತೆ ಜಂಗಮರ ಪರಿಸ್ಥಿತಿ ತೀರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನೆರವಿಗೆ ನಿಲ್ಲಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಪಡೆಯುತ್ತಿದ್ದು, ವೀರಶೈವ ಲಿಂಗಾಯತ ದೊಡ್ಡ ಸಮಾಜವಾಗಿದ್ದು, ಜಂಗಮ ಸಮುದಾಯಕ್ಕೆ ಅದರಲ್ಲಿ ಸರಿಯಾಗಿ ಪಾಲು ದೊರೆಯುತ್ತಿಲ್ಲ. ಆದ್ದರಿಂದ ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ ಸೇರಿ ಎಲ್ಲ ಸಚಿವರು, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಜೆಟ್‌ನಲ್ಲಿ ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ, ಬಹು ವರ್ಷಗಳ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.

ಕಾಶೀನಾಥ ಬಿದರಕರ್, ಸಿದ್ದಲಿಂಗಯ್ಯ ಸ್ಥಾವರಮಠ, ವೀರು ಸ್ವಾಮಿ ನರೋಣಾ, ವೀರೇಶ ವೀರಗಂಟಿ, ಶಿವಕುಮಾರ, ಭದ್ರಯ್ಯ ಸಾಲಿಮಠ, ಮಹೇಶ ಸ್ವಾಮಿ, ನಾಗಯ್ಯ ಹಿರೇಮಠ ಇತರರಿದ್ದರು.