ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ನಗರದ ಮೋಟಗಿ ಬಸವೇಶ್ವರ ಜಾತ್ರೆ ಜ.೩೧ ರಿಂದ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೫ ದಿನಗಳ ಕಾಲ ಮೋಟಗಿ ಬಸವೇಶ್ವರ ದೇವಸ್ಥಾನದಿಂದ ಪ್ರತಿದಿನ ಚಿಕ್ಕ ರಥೋತ್ಸವ ನಡೆಯಲಿದೆ. ಫೆ.೫ ರಂದು ಮಹಾ ರಥೋತ್ಸವ ಹಾಗೂ ಸಂಭ್ರಮದ ಜಾತ್ರೆ ಜರುಗಲಿದೆ ಎಂದರು.
ಜಾನುವಾರು ಜಾತ್ರೆ ರದ್ದು:
ಮೋಟಗಿ ಬಸವೇಶ್ವರ ಜಾತ್ರೆ ಅಂಗವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅದ್ಧೂರಿಯಾಗಿ ಜಾನುವಾರು ಜಾತ್ರೆ ನಡೆಯುತ್ತಿತ್ತು. ಆದರೇ ಈ ಸಾರಿ ಚರ್ಮಗಂಟು ರೋಗ ಜಾನುವಾರುಗಳಲ್ಲಿ ಕಾಣಿಸಿಕೊಂಡ ಪರಿಣಾಮ ಸರ್ಕಾರ ಜಾನುವಾರು ಜಾತ್ರೆಗಳನ್ನು ರದ್ದು ಪಡಿಸಿದೆ. ಸಂಕ್ರಾಮಿಕ ರೋಗ ಆಗಿದ್ದರಿಂದ ಮುಂಜಾಗೃತ ಕ್ರಮವಾಗಿ ಜಾತ್ರೆ ಹಮ್ಮಿಕೊಂಡಿಲ್ಲ. ರೈತಾಪಿ ವರ್ಗ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಕರೆ ತರಬಾರದು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದರು.
ಜಾತ್ರಾ ಕಮೀಟಿ ಅಧ್ಯಕ್ಷ ಸದಾನಂದ ನಾರಾ, ಉಪಾಧ್ಯಕ್ಷ ತಿಪ್ಪಣ್ಣ ಯಳ್ಳಿಗುತ್ತಿ, ಕಾರ್ಯದರ್ಶಿ ಸಂಗಮೇಶ ಗುಡ್ಡದ, ಭೀಮಶಿ ಮೋರೆ, ಬಸವರಾಜ ಬೆನ್ನೂರಮಠ, ಸುರೇಶ ಮಜ್ಜಗಿ, ಐ.ಕೆ.ಕಲ್ಯಾಣಿ, ಸಂಗಮೇಶ ಹಿತ್ತಲಮನಿ, ಸಂತೋಷ ಜಕಾತಿ ಸುದ್ದಿಗೋಷ್ಠಿಯಲ್ಲಿ ಇದ್ದರು.