ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದಿಂದ ಜ.೮ ರಂದು ಚಿತ್ರದುರ್ಗದಲ್ಲಿ ದಲಿತ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಅಂದಿನ ಸಮಾವೇಶಕ್ಕೆ ಪಕ್ಷದ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದು, ಪ್ರತಿ ಜಿಲ್ಲೆಯಿಂದ ಎರಡು ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ಮಾಡುತ್ತಿರುವ ದ್ರೋಹ, ಸಂವಿಧಾನ ಬದಲಾವಣೆ ವಿಷಯ ಜನರಿಗೆ ಮುಟ್ಟಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನೂ ಮಹದಾಯಿ-ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಸ್ವಾಗತಾರ್ಹ. ಆದರೆ ಕಾಮಗಾರಿ ಕೆಲಸಗಳು ಆರಂಭವಾಗಬೇಕು. ಜ.೨ ರಂದು ಹುಬ್ಬಳ್ಳಿಯಲ್ಲಿಯೂ ನಮ್ಮ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಡಾ.ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಸುಮಾರು ೫ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಽಯಲ್ಲಿ ಎಸ್‌ಸಿ.ಎಸ್.ಟಿ ಜನಾಂಗಕ್ಕೆ ವಿದೇಶದಲ್ಲಿ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಲ್ಯಾಪಟಾಪ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಜಾರಿ ತಂದಿದ್ದು, ಆದರೆ ಬಿಜೆಪಿ ಸರ್ಕಾರ ಅವುಗಳನ್ನು ಮೊಟಕುಗೊಳಿಸಿದೆ. ಬಿಜೆಪಿ ಸರ್ಕಾರ ಎಸ್‌ಸಿ. ಎಸ್.ಟಿ. ಜನಾಂಗಕ್ಕೆ ಅನ್ಯಾಯ ಮಾಡಿದೆ. ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖಂಡರಾದ ವೈ.ವೈ.ತಿಮ್ಮಾಪೂರ, ಚಂದ್ರಶೇಖರ ರಾಠೋಡ, ಪಕೀರಪ್ಪ ಮಾದರ, ಶ್ರವಣ ಖಾತೇದಾರ್, ರಾಜು ಮನ್ನಿಕೇರಿ, ರಾಜು ಸಂಗಮ ಮತ್ತಿತರರು ಇದ್ದರು.