ಬಾಗಲಕೋಟೆ: ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಜ.೨೩ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಹೇಳಿದರು.
ಜ.೨೩ ರಂದು ಗುಳೇದಗುಡ್ಡ ಪಟ್ಟಣದಲ್ಲಿ ಆಗಮಿಸುವ ಪಂಚರತ್ನ ಯಾತ್ರೆ ಪಟ್ಟಣದಲ್ಲಿ ಸಂಚರಿಸಿ ನಂತರ ಜನರನ್ನು ಉದ್ದೇಶಿಸಿ ಹಮ್ಮಿಕೊಂಡಿರುವ ಸಭೆಯಲ್ಲಿ ಕುಮಾರಸ್ವಾಮಿಯವರು ಮಾತನಾಡಲಿದ್ದಾರೆ. ನಂತರ ಮಧ್ಯಾಹ್ನ ೩ ಗಂಟೆಗೆ ಕೆರೂರ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಲಿದ್ದು, ಅಂದಾಜು ೨೫ ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ೬.೩೦ಕ್ಕೆ ಬಾದಾಮಿಯ ಎಪಿಎಂಸಿಯಿಂದ ಕಬ್ಬಲಗೇರಿ ಕ್ರಾಸ್‌ವರೆಗೆ ಭವ್ಯ ಪಂಚರತ್ನಯಾತ್ರೆಯ ಮೆರವಣಿಗೆ ನಡೆಯಲಿದೆ. ಅಲ್ಲದೆ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಹಳಗೇರಿ, ಉಗಲವಾಟ, ಮುಷ್ಠಿಗೇರಿ, ಕರಡಿ ಎಸ್‌ಎನ್, ಆಲದಕಟ್ಟಿ, ತಿಮ್ಮಾಪುರ ಎಸ್‌ಎನ್, ನೀಲಗುಂದ, ನರಸಾಪುರ, ಸೋಮನಕೊಪ್ಪ, ಚಿಮ್ಮನಕಟ್ಟಿ, ಖಾನಾಪುರ ಎಸ್‌ಕೆ, ಕಿತ್ತಲಿ, ಹೆಬ್ಬಳ್ಳಿ ಗ್ರಾಮ, ಲಕಮಾಪುರ, ಮುತ್ತಲಗೇರಿ, ಯರಗೊಪ್ಪ ಎಸ್‌ಕೆ, ಚೊಳಚಗುಡ್ಡ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ ಎಂದರು.
ಶಿಕ್ಷಣ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, ವಸತಿ ಆಸರೆ ಎಂಬ ಪಂಚರತ್ನ ಯೋಜನೆಗಳನ್ನು ಕುಮಾರಸ್ವಾಮಿಯವರು ಘೋಷಣೆ ಮಾಡಿದ್ದು, ಜೆಡಿಎಸ್ ಪಕ್ಷದ ಸರ್ಕಾರ ಈ ಭಾರಿ ನಡೆಯುವ ಚುನಾವಣೆಯಲ್ಲಿ ಬಂದ ನಂತರ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಚಾಚೂ ತಪ್ಪದೇ ಮಾಡಲಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಚಂದ್ರಕಾಂತಾ ಶೇಖಾ, ಯಾಸೀನ್ ನದಾಪ್, ಲೋಕೇಶ, ಹುಚ್ಚೇಶ ಹತ್ತಣ್ಣವರ ಸುದ್ದಿಗೋಷ್ಠಿಯಲ್ಲಿ ಇದ್ದರು.