ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಅಂತರಾಷ್ಟ್ರೀಯ ವೀರಶೈವ ಲಿಂಗಾಯತ ಯೂತ್ ವೇದಿಕ ಸಂಘಟಕ ಶ್ರೀಧರ ಸೊಪ್ಪಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘಟಕರಾದ ರವಿ ಕಮ್ಮಾರ, ಬಾಪ್ಪು ಮಹಾಲಿಂಗಶೆಟ್ಟಿ ಇತರರು ಇದ್ದರು. 
ಜಿಲ್ಲೆ

ಜ.೨೦ ರಿಂದ ೨೨ ವರೆಗೆ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್

ಬಾಗಲಕೋಟೆ: ಅಂತರಾಷ್ಟ್ರೀಯ ವೀರಶೈವ ಲಿಂಗಾಯತ ಯೂತ್ ವೇದಿಕೆಯಿಂದ ಜ.೨೦ ರಿಂದ ೨೨ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ -೨೦೨೩ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಶ್ರೀಧರ ಸೊಪ್ಪಿಮಠ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯೇತರ ಹಾಗೂ ಲಾಭೋದ್ದೇಶವಿಲ್ಲದೇ ನಮ್ಮ ಸಂಘಟನೆ ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯದ ವೀರಶೈವ ಲಿಂಗಾಯತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಉದ್ಯಮಿ, ಉದ್ಯಮಶೀಲರನ್ನು ಹಾಗೂ ವೃತ್ತಿಪರರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಇದರ ಉದ್ದೇಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ ಯೋಜನೆಗಳನ್ನು ತಲುಪಿಸುವ ಚಟುವಟಿಕೆ ಮತ್ತು ಮಾರ್ಗೋಪಾಯಗಳನ್ನು ಸಮ್ಮೇಳದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಅಂತರಾಷ್ಟ್ರೀಯ ಲಿಂಗಾಯತ ವೀರಶೈವ ಫೋರಂ ಸ್ಥಾಪನೆಯಾಗಿ ೧೦ ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಫೋರಂ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜಿಲ್ಲಾಮಟ್ಟದಲ್ಲಿ ಸ್ಟಾರ್ಟ್ಅಪ್ ಘಟಕಗಳನ್ನು ಸ್ಥಾಪಿಸಿ ನವೋದ್ಯಮಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಈಗಾಗಲೇ ಇರುವ ಉದ್ಯಮೆ ಹಾಗೂ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಹಾಯಕವಾಗುವುದು. ವೀರಶೈವ ಲಿಂಗಾಯತ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಕಾರ್ಯಮಾಡಲಾಗುತ್ತಿದೆ. ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಸಿಗಳನನ್ನು ನೆಡುವುದು, ಸಂರಕ್ಷಿಸುವುದು. ವೈದ್ಯಕೀಯ ಸೇವೆ ಒದಗಿಸುವುದು ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿನ ಪ್ರತಿಯೊಬ್ಬರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಸಂಘಟಕರಾದ ರವಿ ಕಮ್ಮಾರ, ಬಾಪ್ಪು ಮಹಾಲಿಂಗಶೆಟ್ಟಿ ಇತರರು ಇದ್ದರು.