ಬಾಗಲಕೋಟೆ: ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ, ಹಿಂದುಳಿದ ಅಲ್ಪಸಂಖ್ಯಾತ ಕಾರ್ಮಿಕ ಪ್ರಗತಿಪರ ರೈತ-ಮಹಿಳಾ ಸಂಘಟನೆಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಜ.೨೦ ರಂದು ಬಾಗಲಕೋಟೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಒಕ್ಕೂಟದ ಮುಖಂಡರಾದ ಪರಶುರಾಮ ಮಹಾರಾಜನವರ, ಪೀರಪ್ಪ ಮ್ಯಾಗೇರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್‌ಗೆ ಬಾಗಲಕೋಟೆ ನಗರದ ವ್ಯಾಪಾರಸ್ಥರು, ವಾಹನ ಚಾಲಕರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡಬೇಕು. ಶಾಂತಿಯುತವಾಗಿ ಹೋರಾಟ ನಡೆಯಲಿದೆ. ಅಗತ್ಯ ಸೇವೆಗಳಿಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಂದು ಬೆಳಗ್ಗೆ ೧೦.೩೦ ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹೋರಾಟಕ್ಕೆ ಚಾಲನೆ ನೀಡಲಾಗುವುದು. ನಂತರ ಪ್ರತಿಭಟನಾ ಮೆರವಣಿಗೆಯೂ ಕೃಷ್ಣಾ ಚಿತ್ರ ಮಂದಿರ, ಹಳೇ ಪೋಸ್ಟ್ ಆಫೀಸ್, ಪಂಕಾ ಮಸೀದಿ, ಟಾಂಗಾ ಸ್ಟ್ಯಾಂಡ್, ವಲ್ಲಭಬಾಯಿ ಚೌಕ್, ಎಂ.ಜಿ. ರಸ್ತೆ, ಬಸವೇಶ್ವರ ವೃತ್ತ ಮೂಲಕ ಹೊಳೆ ಆಂಜನೇಯ ವೃತ್ತ ತಲುಪಿ ಸಭೆಯಾಗಿ ಮಾರ್ಪಾಡು ಆಗಲಿದೆ ಎಂದರು.
ಸಂಸತ್‌ನ ರಾಜ್ಯಸಭೆಯಲ್ಲಿ ಬಾಬಾ ಸಾಹೇಬರಿಗೆ ಅವ ಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಅವರಿಗೆ ದೇಶದ ಬಗ್ಗೆ ಗೌರವ ಇಲ್ಲ. ಕೂಡಲೇ ಅವರನ್ನು ಸಚಿವ ಸ್ಥಾನ ವಜಾಗೊಳಿಸಬೇಕು, ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಮಹಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಮಾತನಾಡಿ, ವಿಶ್ವದ ಕೋಟ್ಯಂತರ ರೂ. ಜನರ ಬದುಕಿನಲ್ಲಿ ಬೆಳಕು ನೀಡಿದವರು ಅಂಬೇಡ್ಕರ ಅವರು. ಕೇಂದ್ರ ಸಚಿವರ ಹೇಳಿಕೆಯಿಂದ ಅಹಿಂದ ವರ್ಗಕ್ಕೆ ಆಘಾತ ಉಂಟು ಮಾಡಿದೆ. ನಮಗೆ ದೇವರು ಅಂತ ಇರುವುದೇ ಅಂಬೇಡ್ಕರ. ಯಾರೋ ಪೂಜಿಸುವ ದೇವರನ್ನು ಒಪ್ಪುವದಿಲ್ಲ. ದೇಶದ ಪ್ರತಿ ನಾಗರಿಕರು ಕಾನೂನು, ಬದುಕುವ ಹಕ್ಕು, ಜೀವನ ಕ್ರಮದಲ್ಲಿ ಸಾಮಾಜಿಕ ನ್ಯಾಯ ತಂದುಕೊಟ್ಟಿದ್ದಾರೆ. ನೀವು ಹೇಳುವ ಯಾವ ದೇವರುಗಳು ಬಗ್ಗೆಯೂ ನಮಗೆ ವಿಶ್ವಾಸವಿಲ್ಲ. ಗಡಿಪಾರು ಆಗಿದ್ದ ವ್ಯಕ್ತಿ ದೇಶ ಗೃಹ ಮಂತ್ರಿಯಾಗಿರುವುದು ನಮ್ಮ ದುರಂತ. ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.
ನಗರಸಭೆ ಸದಸ್ಯ ಹಾಜಿಸಾಬ ದಂಡಿನ ಮಾತನಾಡಿ, ನಾವೆಲ್ಲ ಘನತೆಯಿಂದ ಬದುಕಲು ದಾರಿ ತೋರಿಸಿದ ಅಂಬೇಡ್ಕರ ಅವರಿಗೆ ಅವಮಾನ ಆದಾಗ ನಾವೆಲ್ಲ ಒಟ್ಟಾಗಬೇಕಿದೆ. ತಳವರ್ಗದಲ್ಲಿ ಮಾತ್ರವಲ್ಲದೇ ಮೇಲ್ವರ್ಗದವರಿಲ್ಲಿಯೂ ಅಭಿಮಾನಿಗಳು ಇದ್ದಾರೆ. ಎಲ್ಲರಿಗೂ ಶಾ ಹೇಳಿಕೆ ನೋವು ಉಂಟು ಮಾಡಿದೆ. ಬಿಜೆಪಿಯವರಿಗೆ ಮೋದಿ, ಮೋದಿ ಎನ್ನುವುದು -Á್ಯಷನ್ ಇರಬಹುದು. ನಮಗೆ ಅಂಬೇಡ್ಕರ ಎಂದರೇ ಉಸಿರು, ನಾಡಿಮಿಡಿತ. ಈ ಹಿಂದೆ ಸಂವಿಧಾನ ಬದಲಾಯಿಸುತ್ತೇವೆ ಅಂತ ಬಿಜೆಪಿಯವರು ಹೇಳಿಕೆ ನೀಡಿದ್ದರು, ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೀಟುಗಳು ಕಳೆದುಕೊಳ್ಳಬೇಕಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಹೇಳಿಕೆ ಅರ್ಥವಿಲ್ಲ ಎಂದು ತಿಳಿಸಿದರು.
ಮುಖಂಡರಾದ ವೈ.ಸಿ.ಕಾಂಬಳೆ, ಪ್ರೇಮನಾಥ ಗರಸಂಗಿ, ಹೇಮಂತ ಚೂರಿ, ಡಿ.ಬಿ.ಸಿದ್ದಾಪುರ, ಯುವರಾಜ ಬಂಡಿ, ಸೈಪುದ್ದೀನ್ ಕಲಾದಗಿ(ನಕಾಶ) ಇತರರು ಇದ್ದರು.