ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ ಮಹಾಸ್ವಾಮೀಜಿ ಸಿದ್ದಶ್ರೀ ಉತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ವಿಜಯ ಸುಲಾಖೆ ಉಪಸ್ಥಿತರಿದ್ದರು. 
ಜಿಲ್ಲೆ

ಜ.೧೪ ರಿಂದ ಸಿದ್ದಶ್ರೀ ಉತ್ಸವ- ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಪುಣ್ಯಕ್ಷೇತ್ರ ಸಿದ್ದನಕೊಳ್ಳದಲ್ಲಿ ಜ. ೧೪, ೧೫ ಹಾಗೂ ೧೬ ರಂದು ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ - ೨೦೨೩ ಪ್ರತಿದಿನ ಸಂಜೆ ೫ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದನಕೊಳ್ಳದ ಡಾ.ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.
ಉತ್ಸವದ ನಿಮಿತ್ಯವಾಗಿ ರಥೋತ್ಸವ, ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚರ್ಮೇನ್ ಡಾ.ವಿಜಯ ಸಂಕೇಶ್ವರ ಅವರಿಗೆ ೨೦೨೩ ನೇ ಸಾಲಿನ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವದು. ನಟಿಯರಾದ ಪ್ರೇಮಾ, ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ವಿಕ್ಟರಿ ವಾಸು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.೧೪ ರಂದು ನಡೆಯುವ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಮುರನಾಳದ ಮಳೆಯಪ್ಪಜ್ಜನವರು, ಹೆಬ್ಬಳ್ಳಿ ಅಜ್ಜನವರು, ಜಗದ್ಗುರು ವಿಜಯ ಮಹಾಂತ ಶ್ರೀಗಳು, ಒಪ್ಪತ್ತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಕಿಸಾನ ಸಮಿತಿಯ ನಿರ್ದೇಶಕ ಡಾ.ಆರ್.ಎಸ್. ರಾಜು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಜ್ಯೋತಿ ಬೆಳಗಿಸಲಿದ್ದಾರೆ ಎಂದರು.
ಜ.೧೫ ರಂದು ಸಂಜೆ ೫ ಗಂಟೆಗೆ ಏರ್ಪಡಿಸಿರುವ ಸಮಾರಂಭದಲ್ಲಿ ಡಾ.ವಿಜಯ ಸಂಕೇಶ್ವರ ಅವರಿಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವದು. ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ, ಚಿತ್ತರಗಿ ಗುರುಮಹಾಂತ ಶ್ರೀಗಳು, ಅಂಕಲಗಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜ.೧೬ ರಂದು ನಡೆಯವ ಕಾರ್ಯಕ್ರಮವನ್ನು ಶಾಸಕ ಡಾ.ವೀರಣ್ಣ ಚರಂತಿಮಠ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವ ಎಚ್.ವೈ.ಮೇಟಿ ಉದ್ಘಾಟಿಸಲಿದ್ದಾರೆ. ಶಿವಗಂಗೆಯ ಮಲಯ ಶಾಂತ ಮುನಿ ಶಿವಾಚಾರ್ಯರು, ಗುಡದೂರದ ನೀಲಕಂಠಾರ್ಯ ತಾತನವರು, ಧರ್ಮರ ಅಜ್ಜನವರು ಸಾನಿಧ್ಯ ವಹಿಸಲಿದ್ದು, ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು.
ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ವಿಜಯ ಸುಲಾಖೆ ಮತ್ತಿತರರು ಉಪಸ್ಥಿತರಿದ್ದರು.