ಜಿಲ್ಲೆ

ಜ.9 ರಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ

ಬಾಗಲಕೋಟೆ: ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಸಿರಿ ಮೇಳ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಜ.೯ ಮತ್ತು ೧೦ ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣ್ಣಿನ ಫಲವತ್ತತೆ ಕಾಪಾಡಲು ಮತ್ತು ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನಗಳ ಬೇಡಿಕೆ ಇರುವದರಿಂದ ಸಾವಯವ ಬೆಳೆ, ಉತ್ಪನ್ನ ತಯಾರಕರು ಹಾಗೂ ಖರೀದಿದಾರರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಾವಯವ ಸಿರಿ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನಕ್ಕಾಗಿ ಈಗಾಗಲೇ ೯೬ ಸಂಸ್ಥೆ ಮತ್ತು ಇಲಾಖೆಯವರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ೭ ಕಂಪನಿಗಳು ಬಿಜಿನೆಸ್ ಟು ಬಿಜಿನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಿರಿಧಾನ್ಯ ಹಾಗೂ ಸಾವಯವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಚಾರ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಲು ೨೦೨೩ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಸರ್ಕಾರ ಘೋಷಿಸಿದ್ದು, ಮೇಳದಲ್ಲಿ ಸಜ್ಜೆ, ನವಣೆ, ಸಾಮೆ, ರಾಗಿ, ಜೋಳ, ಊದಲು, ಬರಗು, ಹಾರಕ ಮತ್ತು ಕೊರಲೆ ಸೇರಿದಂತೆ ೯ ಬಗೆಯ ಸಿರಿದಾನ್ಯಗಳ ಮಹತ್ವ ತಿಳಿಸಲಾಗುತ್ತಿದೆ. ಇದಕ್ಕಾಗಿ ಜ.೭ ರಂದು ಬೆಳಗ್ಗೆ ೮ ಗಂಟೆಗೆ ಜಿಲ್ಲಾಡಳಿತ ಭವನದಿಂದ ವಿದ್ಯಾಗಿರಿ ವೃತ್ತದವರೆಗೆ ಸಿರಿಧಾನ್ಯಕ್ಕಾಗಿ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಶಿರೋಳನ ಮಾತೋಶ್ರೀ ಉಮಾತಾಯಿ ಟ್ರಸ್ಟ್, ಜಿಲ್ಲಾ ಕೃಷಿಕ ಸಮಾಜ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ತೋವಿವಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಸಹಯೋಗದಲ್ಲಿ ಜ. ೯ ರಂದು ಬೆಳಗ್ಗೆ ೧೧ಕ್ಕೆ ಜರಗುವ ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಮೇಳದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳ ಮಹತ್ವ, ಸಿರಿಧಾನ್ಯ ಬೆಳೆಗಳಲ್ಲಿ ಬೆಳೆ ಉತ್ಪಾದನಾ ತಾಂತ್ರಿಕತೆ ಕುರಿತು ಪರಿಣಿತ ತಜ್ಞರಿಂದ ತಾಂತ್ರಿಕ ಗೋಷ್ಠಿ ನಡೆಯಲಿವೆ ಎಂದು ಹೇಳಿದರು.
ಜ.೧೦ ಎರಡನೇ ದಿನದಂದು ಬೆಳಗ್ಗೆ ೧೦ ರಿಂದ ಸಾವಯವ, ಸಿರಿಧಾನ್ಯ ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯನ್ನು ರೈತ ಉತ್ಪಾದಕ ಸಂಸ್ಥೆಗಳ ಪಾತ್ರ, ಕಿರುಧಾನ್ಯ ಹಾಗೂ ಸಾವಯವ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಕುರಿತು ಪರಿಣಿತ ತಜ್ಞರಿಂದ ತಾಂತ್ರಿಕ ಗೋಷ್ಠಿ ನಡೆಯಲಿವೆ. ಮಧ್ಯಾಹ್ನ ೨ ಗಂಟೆಗೆ ಸಿರಿಧಾನ್ಯಗಳು ಮತ್ತು ಸಾವಯವ ಉತ್ಪನ್ನಗಳಿಗೆ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಭೆ ಜರುಗಲಿದ್ದು, ಅದರಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಽಗಳು, ಸಾವಯವ ಉತ್ಪನ್ನಗಳ ಉತ್ಪಾದಕರು, ಸಿರಿಧಾನ್ಯ ಉತ್ಪಾದಕರು, ಖರೀದಿದಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಮಖಂಡಿ ಕೃಷಿ ಉಪ ನಿರ್ದೇಶಕ ಕೆ.ಎಸ್.ಅಗಸನಾಳ, ಬಾಗಲಕೋಟೆ ಕೃಷಿ ಉಪನಿರ್ದೇಶಕ ಎಚ್.ಡಿ.ಕೋಳೇಕರ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ.ಮೌನೇಶ್ವರಿ ಕಮ್ಮಾರ ಉಪಸ್ಥಿತರಿದ್ದರು.