ಜಿಲ್ಲೆ

ಜ.7, 8ರಂದು ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕಾರಿಣಿ

ಮೈಸೂರು: ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಜ.7 ಮತ್ತು 8ರಂದು ನಗರದಲ್ಲಿ ಆಯೋಜಿಸಲಾಗಿದ್ದು, ರಾಷ್ಟ್ರದ ವಿವಿಧೆಡೆಯಿಂದ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್‌ಸಿಂಗ್ ಆರ್ಯ ತಿಳಿಸಿದರು.
ಕಾರ್ಯಕಾರಿಣಿ ಸಿದ್ಧತೆ ಪರಿಶೀಲನೆಗೆಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಸ್‌ಸಿ ಸಮುದಾಯದ ಬಗ್ಗೆ ಕೇಂದ್ರದ ನೀತಿ ಕುರಿತಂತೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅಲ್ಲದೆ, ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಧನ್ಯವಾದ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ 45 ವರ್ಷ, ಜೆಡಿಎಸ್ ನೇತೃತ್ವದ ಸರ್ಕಾರ 12 ವರ್ಷ ಅಧಿಕಾರ ನಡೆಸಿವೆ. ಆದರೆ ಈ ಪಕ್ಷಗಳು ಮೀಸಲಾತಿ ಹೆಚ್ಚಳ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆದರೆ ಕೇವಲ ಎಂಟು ವರ್ಷ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತ, ದಮನಿತರ ಪರ ಇರುವ ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಪರವಾಗಿವೆ. ಆದರೆ ಕಾಂಗ್ರೆಸ್ ಡಾ.ಅಂಬೇಡ್ಕರ್‌ಗೆ ಭಾರತ ರತ್ನ ನೀಡುವ ಬಗ್ಗೆ ಚಿಂತಿಸಲಿಲ್ಲ, ಅಂಬೇಡ್ಕರ್ ಅವರಿದ್ದ ಸ್ಥಳವನ್ನೂ ರಾಷ್ಟ್ರೀಯ ಸ್ಮಾರಕ ಮಾಡಲಿಲ್ಲ, ಸಂಸತ್ ಭವನದಲ್ಲೂ ಅಂಬೇಡ್ಕರ್ ಭಾವಚಿತ್ರ ಇರಿಸಲಿಲ್ಲ. ಈ ಬಗ್ಗೆ ದಲಿತ ಮುಖಂಡರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವನಿಯೆತ್ತಲಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ದಲಿತರ ಪರ ಇಲ್ಲ ಎಂದು ಟೀಕಿಸಿದರು.
ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಜು, ಟಿ.ಎಸ್.ಶ್ರೀವತ್ಸ, ಮಂಗಳಾ ಸೋಮಶೇಖರ್, ನಂಜುಂಡಸ್ವಾಮಿ ಇತರರು ಇದ್ದರು.