ಹೊಳೆನರಸೀಪುರ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಶ್ರೀ ಭುವನೇಶ್ವರಿ ದೇವಿಯ ಪ್ರತಿಮೆ ವಿರಾಜಮಾನವಾಗಿರುವ ಕನ್ನಡ ರಥವು ಮಂಗಳವಾರ ಮಧ್ಯಾಹ್ನ ತಾಲೂಕಿನ ಗಡಿ ಪ್ರವೇಶಿಸಿತು.
ಮೈಸೂರು ಜಿಲ್ಲೆಯಿಂದ ತಾಲೂಕಿನ ದೊಡ್ಡಹಳ್ಳಿ ಸಮೀಪ ತಾಲೂಕಿನ ಗಡಿ ಪ್ರವೇಶ ಮಾಡಿದ ಕನ್ನಡ ರಥಕ್ಕೆ ತಾಲೂಕು ಆಡಳಿತ ಭವ್ಯ ಸ್ವಾಗತ ಕೋರಿತು. ಈ ವೇಳೆ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, 2023 ಜ.6,7 ಮತ್ತು 8ರಂದು ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ನಾಡಿನ ಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ರಥ ಸಂಸರಿಸುತ್ತಿದೆ ಎಂದು ಮಾಹಿತಿ ನೀಡಿದರು.
ದೊಡ್ಡ ಕಾಡನೂರು ಮಾರ್ಗವಾಗಿ ಹೊಳೆನರಸೀಪುರ ಪಟ್ಟಣ ಪ್ರವೇಶಿಸಿದ ಕನ್ನಡಾಂಬೆಯ ರಥ ಪಟ್ಟಣದ ಮುಖ್ಯರಸ್ತೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿತು. ಕಲಾತಂಡಗಳು ರಥಸಂಚಾರಕ್ಕೆ ಮೆರುಗು ತಂದವು. ಪಟ್ಟಣದ ಜನತೆಗೆ ದರ್ಶನ ನೀಡಿದ ಕನ್ನಡಾಂಬೆಯ ತೇರು ತಾಲೂಕು ಕಚೇರಿಯ ಆವರಣ ತಲುಪಿ, ಬುಧವಾರ ಬೆಳಗ್ಗೆ ಹಳೇಕೋಟೆ, ಹಂಗರಹಳ್ಳಿ, ಮೊಸಳೆಹೊಸಳ್ಳಿ ಮಾರ್ಗವಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಿತು.
ಕಸಾಪ ತಾಲೂಕು ಅಧ್ಯಕ್ಷ ಪುಟ್ಟೇಗೌಡ ಹಾಗೂ ಪದಾಧಿಕಾರಿಗಳು, ತಾಲೂಕಿನ ತಾಲೂಕು ಆಡಳಿತ ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಸದಸ್ಯರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕಾರ್ಯನಿರತ ಪತ್ರಕರ್ತರು, ಸ್ಥಳೀಯ ಜನತೆ ಕನ್ನಡಾಂಬೆಯ ತೇರಿನ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಕನ್ನಡ ಮಾತೆಗೆ ಗೌರವ ಸಲ್ಲಿಸಿದರು.