ಜಿಲ್ಲೆ

ಜ.6 ರಂದು ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ

ಮೈಸೂರು: ಈಡಿಗ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳೂರಿನಿಂದ ಬೆಂಗಳೂರಿನವರೆಗೆ ಐತಿಹಾಸಿಕ ಪಾದಯಾತ್ರೆ ಜನವರಿ 6ರಂದು ಆಯೋಜಿಸಲಾಗಿದೆ ಎಂದು ಸಮುದಾಯದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಸಮುದಾಯದ ಏಳು ಜನ ಶಾಸಕರು, ಇಬ್ಬರು ಸಚಿವರಿದ್ದರೂ ಇವರ‌್ಯಾರೂ ಸಮುದಾಯದ ಬೇಡಿಕೆ ಈಡೇರಿಸದ ಕಾರಣ ಸಮುದಾಯಕ್ಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಸುಮಾರು 70 ಲಕ್ಷ ಜನ ಈಡಿಗ ಸಮುದಾಯದ ಜನಸಂಖ್ಯೆ ಇದೆ. ಬೆಳಗಾವಿ ಅಧಿವೇಶನದೊಳಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹಿಂದುಳಿದ ಪ್ರವರ್ಗ 2ಎ ವರ್ಗದಲ್ಲಿರುವ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಂಡು ಮೀಸಲಾತಿ ಹೆಚ್ಚಿಸಬೇಕು. ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುತ್ತಿರುವ ಸಿಗಂಧೂರ ಚೌಡೇಶ್ವರಿ ದೇವಸ್ಥಾನ ವಿರುದ್ಧ ಸರ್ಕಾರದಿಂದ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ಮಂಗಳೂರು, ಉಡುಪಿ, ಶಿವಮೊಗ್ಗ, ಕಾರವಾರ ಜಿಲ್ಲೆಗಳಲ್ಲಿ ಸಮಾಜಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ನಾರಾಯಣ ಗುರು ಅಧ್ಯಯನ ಪೀಠ ರಚಿಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಮುದಾಯದ ಶಾಸಕರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ದೂರಿದರು.