ಜಿಲ್ಲೆ

ಜ.6, 7ರಂದು ಹಾಸನ ಸಾಹಿತ್ಯೋತ್ಸವ: ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ ಗೌಡ ಮಾಹಿತಿ

ಹಾಸನ: ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜ.6 ಮತ್ತು 7ರಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಸಾಹಿತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ ಗೌಡ ಅವರು ತಿಳಿಸಿದರು.

ಸಾಹಿತ್ಯೋತ್ಸವದ ಉದ್ಘಾಟನೆ ಅಧ್ಯಕ್ಷತೆಯನ್ನು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ವಹಿಸಲಿದ್ದು, ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕವಿ ಬಿ.ಆರ್. ಲಕ್ಷ್ಮಣರಾವ್, ಲೇಖಕ ಗಿರೀಶ್ ರಾವ್ ಹತ್ವಾರ್ ಅವರು ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ. ಎಚ್.ಬಿ. ಮದನ್‌ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಹಿತ್ಯೋತ್ಸವದಲ್ಲಿ ಟಿ.ಎನ್. ಸೀತಾರಾಂ, ರಾಘವೇಂದ್ರ ಪಾಟೀಲ, ವಿ. ಮನೋಹರ್, ಮಂಡ್ಯ ರಮೇಶ್, ಶ್ರೀನಿವಾಸ ಪ್ರಭು ಸೇರಿದಂತೆ 50ಕ್ಕೂ ಹೆಚ್ಚು ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರು, ಸಾಧಕರು, ನಟರು ಗೋಷ್ಠಿಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಸಿದ್ಧ ಲೇಖಕಿ ಭಾನು ಮುಷ್ತಾಕ್ ಅವರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಎರಡು ದಿನಗಳ ನಡೆಯುವ ಸಾಹಿತ್ಯೋತ್ಸವದಲ್ಲಿ ಒಟ್ಟು ಎಂಟು ಗೋಷ್ಠಿಗಳು ನಡೆಯಲಿವೆ. ಮೊದಲ ದಿನ ‘ಗೀತಾ- ಸಂಗೀತ’, ‘ನಮ್ಮ ನೆಲೆ-ನಮ್ಮ ಸೆಲೆ’, ‘ರಂಗಾಂತರಂಗ’, ‘ಕಂಡದ್ದು ಕಂಡ ಹಾಗೆ’ ಎಂಬ ನಾಲ್ಕು ಗೋಷ್ಠಿಗಳು ನಡೆಯಲಿವೆ. ಎರಡನೇ ದಿನ ‘ಹೊಸ ದನಿ-ಹೊಸ ಬನಿ’, ‘ನಾಳೆಗಳು ನಮಗಿರಲಿ’, ‘ಕವಿತಾ ಸಮಯ’, ‘ಎಐನಲ್ಲಿ ವಿಶ್ವ ಸಾಹಿತ್ಯ ನೋಡುವ ಬಗೆ’ ಎಂಬ ನಾಲ್ಕು ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸಾಹಿತ್ಯೋತ್ಸವದಲ್ಲಿ ಭಾಗಿಯಾಗುವವರು ಜ.3ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಎಲ್ಲರಿಗೂ ಉಚಿತ ನೋಂದಣಿ ಇರಲಿದೆ. ಹೊರ ಜಿಲ್ಲೆಗಳಿಂದ ಬಂದವರಿಗೆ ವಸತಿ ಸೌಲಭ್ಯ ಬೇಕೆಂದರೆ 250 ರೂ. ಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ ಮೊಬೈಲ್ ಸಂಖ್ಯೆ 9108847480, 7411477149 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ನಾಗೇಶ್ ಉಪಸ್ಥಿತರಿದ್ದರು.