ಜಿಲ್ಲೆ

ಜ.18ರಿಂದ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮ

ಮೈಸೂರು: ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ ಗೃಹ ಮಂತ್ರಾಲಯದ ಸಹಯೋಗದಲ್ಲಿ 14ನೇ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮವನ್ನು ಜ.18ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ.

ಜ. 19ರಂದು ಬೆಳಗ್ಗೆ 11ಕ್ಕೆ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸುವರು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕಿರುಹೊತ್ತಗೆ ಬಿಡುಗಡೆಗೊಳಿಸುವರು. ಸಂಸದರಾದ ವಿ. ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಸಾ.ರಾ. ಮಹೇಶ್ ಮುಂತಾದವರು ಪಾಲ್ಗೊಳ್ಳುವರು ಎಂದು ನೆಹರು ಯುವ ಕೇಂದ್ರ ಸಂಘಟನೆಯ ಕ್ಷೇತ್ರೀಯ ನಿರ್ದೇಶಕ ಎಂ.ಎನ್. ನಟರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

21ರಂದು ಶಿಬಿರಾರ್ಥಿಗಳಿಗೆ ಮೈಸೂರು ಅರಮನೆ, ಚಾಮುಂಡಿಬೆಟ್ಟ, ಇನ್ಫೋಸಿಸ್ ಕ್ಯಾಂಪಸ್ ಅಥವಾ ಆಯುರ್ ಮಟ್ಟಂ ಆಯುರ್ವೇದಿಕ್ ಆಸ್ಪತ್ರೆ, ಕೆಆರ್‌ಎಸ್ ಬೃಂದಾವನ ಉದ್ಯಾನ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು. 22 ಮತ್ತು 23ರಂದು ಸಂಜೆ ಭರತನಾಟ್ಯ, ಪೂಜಾಕುಣಿತ ಕಲಾ ತಂಡಗಳ ಪ್ರದರ್ಶನ ಇರಲಿದೆ. 24ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅವಕಾಶದಿಂದ ವಂಚಿತರಾದ ಬುಡಕಟ್ಟು ಯುವಜನರಿಗೆ ಅವಕಾಶ ಒದಗಿಸಿಕೊಟ್ಟು ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ, ಕಲೆ, ಆಹಾರ ಪದ್ಧತಿಗಳು, ಆಚಾರ-ವಿಚಾರ, ಉಡುಗೆ-ತೊಡುಗೆ, ಸ್ಥಳ ಪರಿಚಯ, ಭಾಷಾ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಛತ್ತೀಸ್‌ಗಡ, ಜಾರ್ಖಂಡ್, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ , ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ 200 ಯುವಜನರು ಮತ್ತು 20 ಉಸ್ತುವಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇವರಿಗೆ ಯೂತ್ ಹಾಸ್ಟೆಲ್ ಮತ್ತು ಎನ್‌ಎಸ್‌ಎಸ್ ಭವನದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.