ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25ನೇ ಸಾಲಿನ ಚಾಮರಾಜನಗರ ತಾಲೂಕುಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಜ.18ರಂದು ಬೆಳಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಪುರುಷರಿಗೆ ವಾಲಿಬಾಲ್ (10 ಜನ), ಕಬ್ಬಡ್ಡಿ (10 ಜನ), ಹಗ್ಗ ಜಗ್ಗಾಟ (7 ಜನ) ಹಾಗೂ ಮಹಿಳೆಯರಿಗೆ ಕಬ್ಬಡ್ಡಿ (10 ಜನ), ಖೋ-ಖೋ (10 ಜನ), ಹಗ್ಗ ಜಗ್ಗಾಟ (7 ಜನ) ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿ ಸಂಘಗಳು ಮತ್ತು ಪುರುಷ-ಮಹಿಳಾ ಸಂಘಗಳ ಸ್ಪರ್ಧಿಗಳು ಭಾಗವಹಿಸಬಹುದು.
ಕ್ರೀಡಾಪಟುಗಳು ಕ್ರೀಡಾಕೂಟದ ದಿನದಂದು ಬೆಳಗ್ಗೆ 9 ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ಭಾಗವಹಿಸುವ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಉಪಹಾರ ಹಾಗೂ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಮೆಡಲ್, ಟ್ರೋಫಿಗಳನ್ನು ನೀಡಲಾಗುವುದು. ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ತಾಲೂಕುಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಹಾಗೂ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಚಾಮರಾಜನಗರ ತಾಲೂಕಿನ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅರ್ಹರಾಗಿರುತ್ತಾರೆ. ತಾಲೂಕುಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಇಲಾಖೆವತಿಯಿಂದ ನೀಡುವ ಗುರುತಿನ ಚೀಟಿಯನ್ನು ಪಡೆದು ಇತ್ತೀಚಿನ ಭಾವಚಿತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ತರಬೇಕು ಹಾಗೂ ತೀರ್ಪುಗಾರರು ಗುರುತಿನ ಚೀಟಿಯನ್ನು ಕೇಳಿದ್ದಲ್ಲಿ ತೋರಿಸಬೇಕು. ಕ್ರೀಡಾಕೂಟದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ವಿಜೇತರಾದ ಕ್ರೀಡಾ ತಂಡಕ್ಕೆ ವಾಲಿಬಾಲ್, ಖೋ-ಖೋ, ಕಬ್ಬಡಿಗೆ ಪ್ರಥಮ 4 ಸಾವಿರ ರೂ., ದ್ವಿತೀಯ 2 ಸಾವಿರ ರೂ., ಹಗ್ಗ ಜಗ್ಗಾಟ ಪ್ರಥಮ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ. ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಸಂಪರ್ಕಿಸಬಹುದು ಅಥವಾ ದೂ.ಸಂ 08226-224932, ಮೊ.ಸಂ 9916466659, 9844160841, 9945615695, 9880211027 ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.