ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
2021 ನೇ ಸಾಲಿನ ಜ.17 ರಂದು ಅಭಿಯಾನ ನಡೆಯಲಿದ್ದು ಕರೊನಾ ಸೋಂಕಿನ ನಡುವೆ ಅಗತ್ಯ ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಮತ್ತು ಕರೊನಾ ಲಸಿಕಾ ಸಂಬಂಧ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕಾಗಿದೆ. ಪರಸ್ಪರ ಅಂತರ, ಸ್ಯಾನಿಟೈಸರ್ ಮತ್ತು ಮಾಸ್ಕ್ ಧರಿಸುವಿಕೆಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು.
ಕರೊನಾ ಸೋಂಕಿತ ಕುಟುಂಬದವರು ಪೋಲಿಯೋ ಬೂತ್‌ಗೆ ಬರಬೇಕಾಗಿಲ್ಲ. ಅಭಿಯಾನದ 4 ನಾಲ್ಕು ವಾರಗಳ ಬಳಿಕ ಅವರ ಮನೆಗೆ ಹೋಗಿ ಸಿಬ್ಬಂದಿ ಲಸಿಕೆ ಹಾಕುತ್ತಾರೆ. ಪಿಡಿಒ, ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಹಾಗೂ ಇತರೆ ಸಿಬ್ಬಂದಿ ಸೇರಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಸ್ಥಳೀಯ ಮುಖಂಡರಿಂದ ಉದ್ಘಾಟನೆ, ಹಳ್ಳಿಗಳಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಚಾರ, ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆ ತರುವಿಕೆ, 2 ನೇ ಮತ್ತು 3ನೇ ದಿನ ಮನೆ ಮನೆ ಭೇಟಿ ಸೇರಿ ಇತರೆ ಜವಾಬ್ದಾರಿ ನಿರ್ವಹಿಸಬೇಕು. ಯಾವುದೇ ವದಂತಿಗಳಿಗೆ ಆಸ್ಪದ ನೀಡಬಾರದು ಎಂದು ತಿಳಿಸಿದರು.
ಅಭಿಯಾನದ ಹಿನ್ನೆಲೆಯಲ್ಲಿ ಭಾನುವಾರ ಎಲ್ಲ ಶಾಲೆಗಳು ಬಾಗಿಲು ತೆಗೆದು, ಪ್ರತಿದಿನ ಬೆಳಗ್ಗೆ ಪ್ರಾರ್ಥನೆ ಸಮಯದಲ್ಲಿ ಲಸಿಕೆ ಜಾಗೃತಿ ಮೂಡಿಸಬೇಕು. ಹಳ್ಳಿಗಳಲ್ಲಿ ಒಂದು ದಿನ ಮುಂಚಿತವಾಗಿ ಶಾಲಾ ಮಕ್ಕಳಿಂದ ಜಾಥಾ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದಿರಾ ಆರ್.ಕಬಾಡೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸಚಿಕಿತ್ಸಕ ಡಾ.ರಮೇಶ್‌ಕುಮಾರ್ ಮತ್ತಿತರರು ಇದ್ದರು.
1.23 ಲಕ್ಷ ಮಕ್ಕಳಿಗೆ ಲಸಿಕೆ : ಜಿಲ್ಲೆಯಲ್ಲಿ 1,23,286 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕೆ ಬಾಗೇಪಲ್ಲಿ 20, ಚಿಕ್ಕಬಳ್ಳಾಪುರ 25, ಚಿಂತಾಮಣಿ 28, ಗೌರಿಬಿದನೂರು 25, ಗುಡಿಬಂಡೆ 5, ಶಿಡ್ಲಘಟ್ಟಕ್ಕೆ 24 ಹಾಗೂ ಜಿಲ್ಲಾ ಮಟ್ಟಕ್ಕೆ 2 ಪ್ರತ್ಯೇಕ ವಾಹನಗಳು ಸೇರಿ 127 ವಾಹನಗಳ ವ್ಯವಸ್ಥೆ ಕೈಗೊಳ್ಳಲಿದ್ದು ಅಗತ್ಯ ಸಿಬ್ಬಂದಿ ನಿಯೋಜಿಸಲಾಗುತ್ತದೆ.
ಕರೊನಾ ಲಸಿಕೆ ಸಿದ್ಧತೆ : ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಕರೊನಾ ಲಸಿಕೆ ವಿತರಣೆ ಆಗಲಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಕರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಮೊದಲ ಹಂತದ ಲಸಿಕೆ ವಿತರಣೆಗೆ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಈ ಸಂಬಂಧ ಆಯಾ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.