ಮಂಗಳೂರು : ಕರಾವಳಿ ಉತ್ಸವದ ವಿಶೇಷ ಆಕರ್ಷಣೆಯಾಗಿ ತಣ್ಣೀರು ಬಾವಿ ಬೀಚ್‌ನಲ್ಲಿ ಜ.11 ಮತ್ತು 12ರಂದು
ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬೀಚ್ ಉತ್ಸವ ನಡೆಯಲಿದೆ. ಕರಾವಳಿ ಉತ್ಸವ ಈಗಾಗಲೇ ಜನಾಕರ್ಷಣೆ ಪಡೆದಿದ್ದು, ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಬೀಚ್ ಫೆಸ್ಟಿವಲ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.11ರಂದು ಸಾಯಂಕಾಲ 6ಕ್ಕೆ ನೃತ್ಯೋತ್ಸವ, 7.30ಕ್ಕೆ ಮಣಿಕಾಂತ್ ಕದ್ರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜ.12ರಂದು ಬೆಳಗ್ಗೆ 5.30ಕ್ಕೆ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದಿಂದ ಯೋಗ ಕಾರ್ಯಕ್ರಮ, 6.30ಕ್ಕೆ ಉದಯ ರಾಗ, 9ಕ್ಕೆ ಜಲ ಕ್ರೀಡೆ, 9.30ಕ್ಕೆ ಮರಳು ಶಿಲ್ಪ ಸ್ಪರ್ಧೆ, ಸಾಯಂಕಾಲ 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ, 7.30ಕ್ಕೆ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರ ನೀಡಿದರು.
* ಸುರಕ್ಷತೆಗೆ ಸರ್ವ ಕ್ರಮ:
ಬೀಚ್ ಉತ್ಸವದ ಬಳಿಕ ಸ್ವಚ್ಛತೆಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸ್ಥಳೀಯ ಮೀನುಗಾರರ ಜೀವರಕ್ಷಕ ತಂಡ, ಕರಾವಳಿ ರಕ್ಷಣಾ ಪಡೆ, ಲೈಫ್ ಗಾರ್ಡ್‌ಗಳು, ಸ್ಥಳೀಯ ಪೊಲೀಸರ ತಂಡ ರಚನೆ ಮಾಡಲಾಗಿದೆ. ಅಗತ್ಯ ಲೈಟಿಂಗ್ ವ್ಯವಸ್ಥೆಯ ಜತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಬೀಚ್‌ನಲ್ಲಿ ಜಲ ಸಾಹಸ ಕ್ರೀಡೆಗಳಿಗೆ ಸಾಯಂಕಾಲ 6.30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅದುವರೆಗೆ ಸಾರ್ವಜನಿಕರಿಗೆ ಸಮುದ್ರಕ್ಕಿಳಿಯಲು ಅವಕಾಶ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದರು.
ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಅರುಣ್ ಕುಮಾರ್, ಮುಡಾ ಆಯುಕ್ತೆ ನೂರ್ ಝಹರಾ ಖಾನಂ, ಸಂಘಟಕ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.