ಜಿಲ್ಲೆ

ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕರ ಆಯ್ಕೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಜೀವ ಜಗತ್ತಿನ ಸತ್ಯಾಸತ್ಯತೆ ಹೇಳುವ ಪ್ರತಿಬಿಂಬಿವೇ ಛಾಯಾಗ್ರಹಣವಾಗಿದ್ದು, ಇವುಗಳನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ನೂತನ ನಿರ್ದೇಶಕ ನಾಗೇಶ್ ಕುಮಾರ್(ಮಾಣಿಕ್ಯ) ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ನೂತನ ನಿರ್ದೇಶಕರ ಆಯ್ಕೆ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅದೆಷ್ಟೋ ಮಂದಿ ಛಾಯಾಚಿತ್ರ ವೃತ್ತಿಯನ್ನೇ ನಂಬಿ ಬದುಕುಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಎಲ್ಲರ ನಗುಮೊಗದ ಭಾವಚಿತ್ರ ಸೆರೆಹಿಡಿಯುವವನ ಮುಖದಲ್ಲೇ ನೋವಿನ ಗೆರೆಗಳಿವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆವಿಷ್ಕಾರಗಳಾಗಿದ್ದು, ಅದನ್ನು ಅಳವಿಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಕಣ್ಣು ಮತ್ತು ಕ್ಯಾಮರಾ ನಡುವೆ ಅವಿನಾಭಾವ ಸಂಬಂಧವಿದೆ. ಛಾಯಾಗ್ರಾಹಕ ಚಿತ್ರಿಸಿದ ಚಿತ್ರಗಳು ದಾಖಲೆಗಳಾಗಿ ಉಳಿಯಲಿವೆ ಎಂದರು. ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಪ್ರಕಾಶ್‌ಮೂರ್ತಿ ಮಾತನಾಡಿ, ತಾವು ನೋವು ಮತ್ತು ಸಂಕಟ ಅನುಭವಿಸುತ್ತಿದ್ದರೂ ಎದುರಿಗಿರುವವರನ್ನು ನಗಿಸಿ, ಚಿತ್ರಸರೆ ಹಿಡಿಯುವ ಕಲೆ ಎಲ್ಲರಿಗೂ ಇಷ್ಟವಾಗುತ್ತದೆ. ವೃತ್ತಿಪರ ಛಾಯಾಚಿತ್ರಗ್ರಾಹಕರು ಬದ್ಧತೆಯಿಂದ ಸೇವೆ ಸಲ್ಲಿಸುತ್ತಾ ಬದುಕುಕಟ್ಟಿಕೊಳ್ಳಬೇಕಿದೆ. ವೃತ್ತಿಪರ ಛಾಯಾಚಿತ್ರಗ್ರಾಹಕರು ದುಡಿದ ಹಣವನ್ನು ಉಳಿಸಿ, ತಮ್ಮ ಮಕ್ಕಳ ಬದುಕನ್ನು ರೂಪಿಸಬೇಕು ಎಂದರು. ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷ ಬೈಲೇಗೌಡ, ಪ್ರಧಾನ ಕಾರ್ಯದರ್ಶಿ ರಂಗನಾಥ್, ಖಜಾಂಚಿ ಬೈಲೇಗೌಡ, ನಗರ ಸಂಚಾಲಕ ರವಿಕಾಂತ್, ನಿರ್ದೇಶಕ ಹನುಮಂತರಾಜು, ಗಂಗರಾಜು, ಮಧುಸೂದನ್, ಗಂಗಾಧರ್, ಸದಸ್ಯ ಸತ್ಯ, ನರಸಿಂಹರೆಡ್ಡಿ, ರಮೇಶ್, ಚೇತನ್, ಜಗದೀಶ್, ಮಂಜುನಾಥ್, ಮೌನಚಾರ್ ಮತ್ತಿತರರು ಇದ್ದರು.

ಅವಿರೋಧ ಆಯ್ಕೆ: ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಆಡಳಿತ ಮಂಡಳಿಯ 4 ಸ್ಥಾನಕ್ಕೆ ನಾಗೇಶ್‌ಕುಮಾರ್(ಮಾಣಿಕ್ಯ), ಬಾವಿಕೆರೆ ಹನುಮಂತರಾಜು, ರವಿಕುಮಾರ್, ಯತೀಶ್ ಕುಮಾರ್ ಅವಿರೋಧ ಆಯ್ಕೆಯಾದರು.