ಕಲಬುರಗಿ: ಸಮಾಜದ ಪ್ರತಿಬಿಂಬ ಆಗಿರುವ ಛಾಯಾಗ್ರಾಹಕರು ಸಂಘಟಿತರಾಗಿ ಕೆಲಸ ಮಾಡಿದರೆ ಹೆಚ್ಚಿನ ಬಲ ಬರುತ್ತದೆ. ಕೂಡಾದಿಂದ ಛಾಯಾಗ್ರಾಹಕರ ಸಂಘಕ್ಕೆ ಒಂದು ನಿವೇಶನ ಒದಗಿಸಲು ಶ್ರಮಿಸಲಾಗುವುದು ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ಅಧ್ಯಕ್ಷ ಮಜರ್ ಆಲಂಖಾನ್ ಭರವಸೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ, ಕಲ್ಯಾಣ ಕರ್ನಾಠಕ ಛಾಯಾ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮೇಯರ್ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ಹಲವು ಸೌಲಭ್ಯಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ತೋಟದ ಮಾತನಾಡಿ, ಎಲ್ಲ ಕೈಯಲ್ಲಿ ಸ್ಮಾರ್ಟ್ಫೋನ್ ಇರುವುದರಿಂದ ಛಾಯಾಗ್ರಾಹಕರು ತೀವ್ರ ಸ್ಪರ್ಧೆ ಏರ್ಪಡಿಸುತ್ತಿದ್ದು, ವೃತ್ತಿ ಘನತೆ ಹೆಚ್ಚಿಸಿಕೊಳ್ಳಲು ಸಂಘಟಿತರಾಗಿ ಸಾಗಬೇಕಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ಮಹತ್ವದ ಸನ್ನಿವೇಶ, ಮರೆಯಲಾಗದ ಕ್ಷಣಗಳನ್ನು ಛಾಯಾಚಿತ್ರಗಾರರು ಸೆರೆಹಿಡಿಯುತ್ತಾರೆ. ಪೈಪೋಟಿ ಮಧ್ಯೆ ಭಿನ್ನ, ವಿಭಿನ್ನವಾಗಿ ಚಿತ್ರಗಳನ್ನು ಸೆರೆಹಿಡಿದು ಸಾಗಬೇಕು ಎಂದರು.
ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ಪವನಸಿಂಗ್ ಠಾಕೂರ, ವಿಜಯಕುಮಾರ ರಾಠೋಡ್, ಸಂಜೀವಕುಮಾರ ಗಾರಂಪಳ್ಳಿ, ಮಲ್ಲಿಕಾರ್ಜುನ ತುಪ್ಪದಮಠ, ಸಿದ್ರಾಮಪ್ಪ ಕಬಾಡೆ, ಪ್ರಕಾಶ ಜಂಗಲೆ, ಈರಣ್ಣ ಕಿರಣಗಿ, ರಮೇಶ ಲಾಲಬುಂದ್ರೆ, ಗುರುಪಾದಯ್ಯ ಮಠ, ಪ್ರಕಾಶ ಎಂ ಶೇರಖಾನೆ, ಅರುಣಕುಮಾರ ತೆಗನೂರ, ಶಿವಕುಮಾರ ಪಾಟೀಲ್, ಶರಣು ಕಟ್ಟಿಮನಿ, ಮಹ್ಮದ್ ಅಫಸರ್ ಪಟೇಲ್, ರಾಚಯ್ಯ ಪತ್ರೆ ಇತರರಿದ್ದರು. ಮಲ್ಲಿಕಾಜುನ ಮರತೂರ ನಿರೂಪಣೆ ಮಾಡಿದರು.
ಕಕ ಸಾಧಕ ಪ್ರಶಸ್ತಿ: ಹಣಮಂತರಾಯ ಹೂವಿನಹಳ್ಳಿ, ಎಂಡಿ ಅದಮ್, ಶ್ರೀನಿವಾಸ ಚಾಂದಿಮನಿ, ರವೀಂದ್ರ ಪಾಂಚಾಳ, ಶರಬಣ್ಣ ಪಟ್ಟೇದಾರ, ಸಾಹೇಬಗೌಡ ಮೇಟಿ, ಬಸವರಾಜ ಕಗ್ಗೋಡು, ಶಿವಕುಮಾರ ಧನ್ನಿ ಅವರಿಗೆ ಕಲ್ಯಾಣ ಕರ್ನಾಟಕ ಛಾಯಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನೀಲಕುಮಾರ ಹುಮನಾಬಾದ್, ವಿದ್ಯಾಪ್ರಕಾಶ ಗುಮ್ಮಟ, ಲಕ್ಷಿಕಾಂತ ಕೋಗನೂರ, ಜೀತೇಂದ್ರ ಸಿಂಗ್, ಶ್ರೀಕಾಂತ ಅಕ್ಕಾ, ಪ್ರವೀಣ ಮುಚಳಂಬಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.