ಬಾಗಲಕೋಟೆ: ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಗಳಲ್ಲಿ ಒಂದನ್ನು ಛಲವಾದಿ ಸಮಾಜಕ್ಕೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರದಲ್ಲಿ ಜಯಗಳಿಸಲು ಹಗಲು ರಾತ್ರಿ ಶ್ರಮಿಸಿದ ಹಾಗೂ ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಡಾ.ಎಂ.ಎಚ್.ಚಲವಾದಿ ಅವರಿಗೆ ವಿ.ಪ ಸದಸ್ಯ ಸ್ಥಾನ ನೀಡಿ ಬಾಗಲಕೋಟೆ ಜಿಲ್ಲೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಡಾ.ಎಂ.ಎಚ್.ಚಲವಾದಿ ಅವರು ಅವಿಭಜಿತ ವಿಜಯಪುರ ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ದುಡಿದವರಾಗಿದ್ದು, ಅವಳಿ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದ್ದು, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಚಲವಾದಿ ಅವರಿಗೆ ಅನ್ಯಾಯ ಮಾಡಿತು. ಅವರಿಗೆ ನ್ಯಾಯ ಕೊಡಿಸಬೇಕಾದ ಅವಕಾಶ ಈಗ ಬಂದಿದ್ದು ಅವಳಿ ಜಿಲ್ಲೆಯ ಸಚಿವರು, ಶಾಸಕರು ಸಹಕಾರಿ ನೀಡಿ ಛಲವಾದಿ ಸಮುದಾಯಕ್ಕೆ ಗೌರವ ಒದಗಿಸಬೇಕು ಎಂದರು.
ಛಲವಾದಿ ಸಮಾಜದ ಮುಖಂಡ ಮಹಾದೇವ ಹಾದಿಮನಿ ಮಾತನಾಡಿ, ಸಮುದಾಯವು ಯಾವಾಗಲೂ ಕಾಂಗ್ರೆಸ್ ಪರವಾಗಿ ನಿಂತಿದೆ. ಕಷ್ಟ ಕಾಲದಲ್ಲೇ ಪಕ್ಷವನ್ನು ಛಲವಾದಿ ಸಮಾಜ ಕೈ ಬಿಟ್ಟಿಲ್ಲ ಸಮುದಾಯವನ್ನು ಕಾಂಗ್ರೆಸ್ ಕೈ ಬಿಡುವದಿಲ್ಲ ಎಂಬ ನಂಬಿಕೆ ನಮಗಿದೆ. ೬೮ ವರ್ಷದ ಡಾ.ಎಂ.ಎಚ್. ಚಲವಾದಿ ಅವರು ಎಂ.ಎ. ಪಿಎಚ್‌ಡಿ ಪದವಿಧರರಾಗಿದ್ದು ಸದ್ಯ ರಾಜ್ಯ ಕೆಪಿಸಿಸಿಯ ಜನರಲ್ ಸಕ್ರೇಟರಿಯಾಗಿ ಕಾರ್ಯನಿರ್ವಹಿಸುಯ್ಯದ್ದಾರೆ. ಸೋಶಿಯಲ್ ಮೀಡಿಯಾ, ಟ್ವಿಟರ್ ಹಾಗೂ ಇನ್‌ಸ್ಟ್ಯಾಗ್ರಾಮ ಸೇರಿದಂತೆ ಹತ್ತು ಹಲವು ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಬಾದಾಮಿಯ ಕಾಳಿದಾಸ ಕೋ-ಆಫ್ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಗಲಕೋಟೆ ಜಿ.ಪಂ. ಉಪಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಎನ್.ಬಿ.ಗಸ್ತಿ ಮಾತನಾಡಿ, ಕಳೆದ ೭೦ ವರ್ಷಗಳಿಂದ ಬಾಗಲಕೋಟೆ-ವಿಜಯಪುರ ಜಿಲ್ಲೆಯ ಮೀಸಲು ಕ್ಷೇತ್ರದಲ್ಲಿಯೂ ಛಲವಾದಿ ಸಮುದಾಯಕ್ಕೆ ಅವಕಾಶ ನೀಡಿದ್ದು ಬಹಳಷ್ಟು ಕಡಿಮೆ. ಈ ವರೆಗೆ ವಿ.ಪ ಸದಸ್ಯ ಸ್ಥಾನ ದೊರೆತಿಲ್ಲ. ಇದೀಗ ಅವಕಾಶವಿದ್ದು, ಛಲವಾದಿ ಸಮಾಜಕ್ಕೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಸಮಾಜದ ನಿರ್ಧಾರ ಬೇರೆಯಾಗಲಿದೆ ಎಂದು ಹೇಳಿದರು.
ಮುಖಂಡರಾದ ಚಂದ್ರಶೇಖರ ಚಲವಾದಿ, ರವಿ ಬಬಲೇಶ್ವರ, ಪರಶುರಾಮ ನಾರಾಯಣಿ, ಹುಲಿಗೆಪ್ಪ ಹೊದ್ಲೂರ, ಶಿವಾನಂದ ಕಾಂಬಳೆ, ಬ್ರಹ್ಮಾನಂದ ಕಾಂಬಳೆ, ಮಹೇಶ ಬೀಳಗಿ ಇದ್ದರು.