ಚಾಮರಾಜನಗರ: ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ರಾಜ್ಯ ಬಿಜೆಪಿ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ಸಮುದಾಯಗಳ ನಡುವೆ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನಿರಂತರವಾಗಿ ದಲಿತ ಸಮುದಾಯದ ನಾಯಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡುವಂತೆ ಕುಮ್ಮಕ್ಕು ನೀಡುತ್ತಿದೆ. ಛಲವಾದಿ ನಾರಾಯಣಸ್ವಾಮಿ ಮತ್ತು ರವಿಕುಮಾರ್ ಅವರನ್ನು ದಲಿತರ ಮೇಲೆ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. ಅಪ್ಪಟ ಅಂಬೇಡ್ಕರ್‌ವಾದಿ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವಹೇಳನಕಾರಿ ಪದಗಳನ್ನು ಬಳಕೆ ಮಾಡುತ್ತಿರುವ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಯಜಮಾನ ಮಹದೇವಯ್ಯ, ದಸಂಸ ಸದಸ್ಯರಾದ ಯಳಂದೂರು ಮಲ್ಲಿಕಾರ್ಜುನ, ವೆಂಕಟರಮಣಸ್ವಾಮಿ, ಮಹದೇವಸ್ವಾಮಿ, ಉಮೇಶ್, ಬಸವಯ್ಯ, ಆಟೋ ಉಮೇಶ್, ಪುಟ್ಟ ಬಸಮ್ಮ, ಪಾರ್ವತಮ್ಮ, ಪುಟ್ಟ ನಂಜಮ್ಮ, ರಾಜಮ್ಮ ಹಾಗೂ ಇತರರು ಭಾಗವಹಿಸಿದ್ದರು.