ದೇವನಹಳ್ಳಿ: ಛಲ ಇದ್ದರೆ ಗುರಿ ಸಾಧಿಸಬಹುದು. ಇದಕ್ಕೆ ಶಿಸ್ತುಪಾಲನೆ ಬಹಳ ಮುಖ್ಯ ಎಂದು ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಸ್. ಪ್ರಭಾಕರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿರುವ ಸರ್ಕಾರಿ ಪ್ರೌಢಶಾಲೆಗಳ ಹೆಣ್ಣುಮಕ್ಕಳಿಗೆ 8 ದಿನಗಳ ಉಚಿತ ಥ್ರೋಬಾಲ್ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ವಿದ್ಯೆ ಹಾಗೂ ದೈಹಿಕ ಬೆಳವಣಿಗೆಗೆ ವಿದ್ಯಾರ್ಥಿ ದೆಸೆಯಿಂದಲೇ ಶ್ರಮ ವಹಿಸಬೇಕು. ತರಬೇತುದಾರರು ಕಲಿಸುವುದನ್ನು ಶ್ರದ್ಧೆಯಿಂದ ಕಲಿಯಬೇಕು. ಸಾಧನೆ ಮಾಡಲು ಇಂತಹ ತರಬೇತಿ ಶಿಬಿರಗಳು ಸಹಕಾರಿ ಎಂದರು.
ಸಂಘದ ಮಾಜಿ ಕಾರ್ಯದರ್ಶಿ ಸಿ.ಎಂ. ವೆಂಕಟೇಶ್ ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ ಪ್ರತಿಭೆ ಹೊರತರಲು ಅವಕಾಶ ಬೇಕಾಗುತ್ತದೆ. ಅಂತಹ ಪ್ರತಿಭೆಗಳನ್ನು ಕ್ರೀಡಾ ಸಂಘ ಬೆಳಕಿಗೆ ತರುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಿ. ಪುಟ್ಟಸ್ವಾಮಿ ಮಾತನಾಡಿ, ಹಿರಿಯರು ಹೇಳಿದ ಮಾತನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪುರಸಭೆ ಸದಸ್ಯರಾದ ಜಿ.ಎ.ರವೀಂದ್ರ, ವೈ.ಆರ್. ರುದ್ರೇಶ್, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್. ಲೋಕೇಶ್, ಯುವಜನ ಕ್ರೀಡಾ ಇಲಾಖೆ ತರಬೇತುದಾರರಾದ ಪ್ರಭು, ಪವಾರ್, ರಮೇಶ್, ಅಜಿತ್, ಮಾಜಿ ಕಾರ್ಯದರ್ಶಿ ಸಿ.ಎಂ. ವೆಂಕಟೇಶ್ ಮತ್ತಿತರರಿದ್ದರು.