ಜಿಲ್ಲೆ

ಛದ್ಮವೇಷ ಧರಿಸಿ ಸಂಭ್ರಮಿಸಿದ ಚಿಣ್ಣರು

ರಾಜಣ್ಣ

ನಾಪೋಕ್ಲು: ವಿವಿಧ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಿನವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳಿಗೆ ಆಟೋಟಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಹಾಡು, ನೃತ್ಯ, ಛದ್ಮವೇಷ ಪ್ರದರ್ಶಿಸಿದರು.

ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಛದ್ಮವೇಷ, ಹಾಡುಗಾರಿಕೆ, ನೃತ್ಯ ಕಾರ್ಯಕ್ರಮವು ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಪ್ರಾಂಶುಪಾಲರಾದ ಬಿ.ಎಂ.ಶಾರದಾ ಮಾತನಾಡಿ, ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಲಾಲ್ ನೆಹರು ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಶಿಕ್ಷಕಿ ಎಂ.ಬಿ.ಭಾಗೀರಥಿ ಮಾತನಾಡಿ, ನೆಹರು ಅವರಿಗೆ ಮಕ್ಕಳೆಂದರೆ ಬಹಳ ಮಮತೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಶಾಲಾ ನಾಯಕಿ ಬಿ.ಎನ್. ವಿಶಾಲಾಕ್ಷಿ ದಿನದ ಮಹತ್ವ ಕುರಿತು ಮಾತನಾಡಿದರು.

ಅಧ್ಯಕ್ಷತೆಯನ್ನು ಶಾಲಾ ಸಾಂಸ್ಕೃತಿಕ ನಾಯಕಿ ಬಿ.ಬಿ.ಶ್ರೀಶಾನ ವಹಿಸಿದ್ದರು.

ವಿದ್ಯಾರ್ಥಿ ಸಂಘದ ನಾಯಕರಾದ ಬಿ.ಎಲ್.ವಿಶಾಲಾಕ್ಷಿ, ಬಿ.ಬಿ.ತ್ರಿಶಾನ, ಕೆ.ಆಕಾಶ್, ಪಿ.ಎಂ.ದೇವಯ್ಯ, ಕೃಪಾ ನಂಜಪ್ಪ, ಹಾಜರಿದ್ದರು.