ಜಿಲ್ಲೆ

ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶ ಅನುಸರಿಸಿ: ಸಂಸದ ಶ್ರೇಯಸ್ ಪಟೇಲ್ ಕರೆ

ಹಾಸನ: ಇಡೀ ದೇಶಕ್ಕೆ ಮಾದರಿಯಾದಂತಹ ಕ್ರಾಂತಿವೀರ ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಅವರು ಕರೆ ನೀಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಅವರ ಧೈರ್ಯ, ಶೌರ್ಯ, ನೇರ ನುಡಿಯನ್ನು ಎಲ್ಲರೂ ಮೆಚ್ಚಲೇಬೇಕು. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆಯೋಣ ಎಂದು ತಿಳಿಸಿದರು.

ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ ಮಾತನಾಡಿ, ಛತ್ರಪತಿ ಶಿವಾಜಿಯವರು ಕೇವಲ ಮರಾಠ ಸಮಾಜಕ್ಕೆ ಸೀಮಿತವಲ್ಲ. ಇಡೀ ವಿಶ್ವಕ್ಕೆ ಆದರ್ಶ ಪುರುಷರಾಗಿದ್ದಾರೆ. ಇವರು ರಾಷ್ಟ್ರ ನಾಯಕ , ಸ್ವರಾಜ್ಯ ಸ್ಥಾಪಕರಾಗಿದ್ದಾರೆ. ಭಾರತೀಯರೆಲ್ಲರೂ ಒಂದೇ ಎಂಬ ಉದಾತ್ತ ಆದರ್ಶ ಕೊಟ್ಟಿರುವ ಮಹಾಪುರುಷರಲ್ಲಿ ಶಿವಾಜಿ ಅವರೂ ಒಬ್ಬರು. ವಿಶ್ವಕ್ಕೆ ಕೊಡುಗೆ ಸಲ್ಲಿಸಿದ ಮಹನೀಯರನ್ನು ಕೇವಲ ನಾಲ್ಕು ಗೋಡೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.

ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಾಜಿ ಅವರು ವೀರ ಯೋಧರಾಗಿದ್ದು, ವಿಶ್ವ ಪ್ರಸಿದ್ಧರಾಗಿದ್ದಾರೆ. ಶಿವಾಜಿ ಅವರ ಪುತ್ಥಳಿಯನ್ನು ಹಾಸನದಲ್ಲಿ ಶೀಘ್ರದಲ್ಲೇ ಅನಾವರಣ ಮಾಡೋಣ ಹಾಗೂ ಮರಾಠ ಸಮುದಾಯದ ಮಕ್ಕಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಿಕೊಡುವುದರ ಕುರಿತು ಮನವಿ ಮಾಡಿದ್ದೀರಿ. ಅದನ್ನು ಶೀಘ್ರದಲ್ಲೇ ಶಾಸಕರ ನಿಧಿಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು.

ವಕೀಲ ವಿಜಯಕುಮಾರ್ ನಾರ್ವೆ ಅವರು ಮಾತನಾಡಿ, ನಮ್ಮ ಭಾರತ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತವಾದ ದೇಶವಾಗಿದೆ. ಈ ದೇಶದಲ್ಲಿ ಮಹಾನ್ ಪುರುಷರು, ಸಾಧು ಸಂತರು ಜನಿಸಿದ್ದಾರೆ. ಅವರಲ್ಲಿ ಛತ್ರಪತಿ ಶಿವಾಜಿಯವರು ಕೂಡ ಒಬ್ಬರಾಗಿದ್ದಾರೆ. ಇವರು ವಿಶ್ವಕ್ಕೆ ಕೊಡುಗೆ ಸಲ್ಲಿಸಿದ ಮಹನೀಯರಲ್ಲಿ ಒಬ್ಬರು. ಇಂದು ಇವರ 398ನೇ ಜಯಂತ್ಯುತ್ಸವವನ್ನು ಆಚರಿಸುತ್ತಿದ್ದೇವೆ. ಇವರು ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಮಾದರಿ ಆಗಿದ್ದಾರೆ ಎಂದು ಛತ್ರಪತಿ ಶಿವಾಜಿ ಅವರ ಕುರಿತು ವಿವರವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ಹಾಸನ ಜಿಲ್ಲಾ ನೌಕರರ ಸಂಘದ ಗೌವಾಧ್ಯಕ್ಷರಾದ ಈ.ಕೃಷ್ಣೇಗೌಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.