ಚೌಳಹಿರಿಯೂರು ಗ್ರಾಪಂ ಗ್ರಾಮ ಸಭೆಯನ್ನು ಅಧ್ಯಕ್ಷೆ ಸುಧಾ ಉದ್ಘಾಟಿಸಿದರು. ಪ್ರೇಮಾ, ಡಾ. ಸುನೀಲ್, ಸಂದೀಪ್, ಶಿವಶಂಕರ್, ಅನಸೂಯಾ, ಪ್ರೇಮಾ ಇತರರಿದ್ದರು. 
ಜಿಲ್ಲೆ

ಚೌಳಹಿರಿಯೂರಿಗೆ ಸಮುದಾಯ ಆಸ್ಪತ್ರೆ ಅಗತ್ಯ

ಚೌಳಹಿರಿಯೂರು: ಚೌಳಹಿರಿಯೂರಿನಲ್ಲಿ ಸಮುದಾಯ ಆಸ್ಪತ್ರೆ ನಿರ್ಮಿಸಬೇಕಿದೆ ಎಂದು ಸ್ಥಳೀಯ ಆಯುಷ್ಮಾನ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಜುನ್ ತಿಳಿಸಿದರು.

ಗ್ರಾಪಂ ಗ್ರಾಮಸಭೆಯಲ್ಲಿ ಮಾತನಾಡಿ, ಗ್ರಾಮ ದೊಡ್ಡದಾಗಿರುವುದರಿಂದ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಆಂಬುಲೆನ್ಸ್ ಅವಶ್ಯಕ ಎಂದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯ ಶಿಕ್ಷಕ ಎಚ್.ಎಂ.ರುದ್ರೇಶ್ ಮಾತನಾಡಿ, ಶಾಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ 684 ವಿದ್ಯಾರ್ಥಿಗಳಿದ್ದು, ಶೇ.90 ಲಿತಾಂಶ ಲಭಿಸಿದೆ ಎಂದು ತಿಳಿಸಿದರು.

ಸ್ಥಳೀಯರು ಮಾತನಾಡಿ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆಗೆ ಐದು ಮಂದಿ ಇದ್ದರೂ ಬೇಳೆಕಾಳುಗಳನ್ನು ಶಿಕ್ಷಕರು ಮನೆಗೆ ತೆಗೆದುಕೊಂಡು ಹೋಗಿ ಸ್ವಚ್ಛ ಮಾಡಿಸಿಕೊಂಡುಬರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಕೆಲವು ಶಾಲೆಗಳ ದೋಷಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು. ಗ್ರಾಮದಲ್ಲಿ ದಾರಿ ಮಧ್ಯೆ ಇರುವ ವಿದ್ಯುತ್‌ಕಂಬಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಕೆಎಸ್‌ಆರ್‌ಟಿಸಿ ಕಡೂರು ಡಿಪೋದಿಂದ ಶಾಲಾ ಕಾಲೇಜು ಸಮಯಕ್ಕೆ ಬಸ್ ಬಿಡಲು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೆಲವು ದಿನಗಳ ಹಿಂದೆ ಶಾಸಕ ಕೆ.ಎಸ್.ಆನಂದ್ ಅವರು 2 ಬಸ್ ಸೇವೆ ಕಲ್ಪಿಸಿಕೊಟಿದ್ದರೂ ಸಮಯ ಬದಲಾವಣೆ ಮಾಡಿಸಿದರೆ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು. ಕನ್ನಡ ರಾಜ್ಯೋತ್ಸವ ಸಮಿತಿಯಿಂದ ರಾಜ್ಯೋತ್ಸವಕ್ಕೆ ಶಾಲಾ ಮಕ್ಕಳು ಸ್ತಬ್ಧಚಿತ್ರಗಳೊಂದಿಗೆ ಭಾಗವಹಿಸುವಂತೆ ಮನವಿ ಮಾಡಿದರು.

ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಲೋಕೆಶ್, ನೋಡಲ್ ಅಧಿಕಾರಿ ಡಾ. ಸುನೀಲ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಶೋಭಾರಾಣಿ, ಉಷಾರಾಣಿ, ವೈ.ಬಿ.ಹನುಮಂತಪ್ಪ, ಗೋಣಿ ಬಸಪ್ಪ, ಹರೀಶ್, ಸಂಜೀವಿನಿ ಒಕ್ಕೂಟದ ಶಾರದಮ್ಮ ಇಲಾಖೆಗಳಿಂದ ಜನರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜ್, ಎಚ್.ಎಸ್.ಮಲ್ಲೇಶ್, ಗಾಡಿ ಯತೀಶ್, ಸಂದೀಪ್, ಶಿವಶಂಕರ್, ಅನಸೂಯಾ, ಪ್ರೇಮಾ, ಕುಮಾರಸ್ವಾಮಿ, ವಿನಯ್, ಎಂ.ವೀಣಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.