ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ನವರಾತ್ರಿ ಉತ್ಸವ ಹಾಗೂ ದಸರಾ ಮಹೋತ್ಸವಕ್ಕೆ ದೇಗುಲದ ಧರ್ಮದರ್ಶಿ ಎಚ್.ವಿ.ಫಣೀಶ್ ಸೋಮವಾರ ಚಾಲನೆ ನೀಡಿದರು.
ಈ ವರ್ಷ ದೇವರ ಕೃಪೆಯಿಂದ ಉತ್ತಮವಾಗಿ ಮಳೆಯಾಗಿದ್ದು, 20 ವರ್ಷದ ನಂತರ ಊರಿನ ದೊಡ್ಡಕೆರೆ ತುಂಬಿದೆ. ಅಂತರ್ಜಲ ಚೇತರಿಕೆ ಕಂಡಿದ್ದು ರೈತರ ಮೊಗದಲ್ಲಿ ಹರ್ವ ಮೂಡಿದೆ ಎಂದು ಎಚ್.ವಿ.ಫಣೀಶ್ ಹೇಳಿದರು.
ನಿತ್ಯ ಬೆಳಗ್ಗೆ ಮೂಲ ದೇವಸ್ಥಾನದಲ್ಲಿ ಹೋಮ, ಪೂಜೆ ಹಾಗೂ ರಾತ್ರಿ 8 ಗಂಟೆಗೆ ದೇವಿಯ ಉತ್ಸವ ನಡೆಯಲಿದೆ. ಭಕ್ತರು ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ನವರಾತ್ರಿ ಪ್ರಾರಂಭದ ಅಂಗವಾಗಿ ಚೌಡೇಶ್ವರಿ ದೇಗುಲದಲ್ಲಿ ಹಾಸನದ ಶೃಂಗೇರಿಯ ವೇದ ಘನಪಾಟಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನವ ಚಂಡಿಕಾ ಹೋಮ ನಡೆಯಿತು. ದೇಗುಲದ ಮುಖ್ಯ ಅಚರ್ಕ ಎಚ್.ಆರ್.ಅನಂತರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಚೌಡೇಶ್ವರಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಮಾರುತಿ ಮಂಜು, ಪಿಡಿಒ ದರ್ಶನ್, ಗ್ರಾಮದ ಮುಖಂಡರಾದ ಅರಳಿಮರದ ಕುಮಾರ್, ಎಚ್.ಎಸ್.ರವಿಕುಮಾರ್, ದಿನೇಶ್, ಎಚ್.ಎಸ್.ಶ್ರೀಧರ್, ಎಚ್.ಜಿ.ಮಂಜುನಾಥ್, ಬೋರೇಗೌಡ, ಬೀದಿಮನೆ ಶ್ರೀನಿವಾಸ್, ಕರವೇ ಮಹೇಶ್, ವಾಸು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.