ಬೇಲೂರು: ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಶುಕ್ರವಾರ ದೇವಾಂಗ ಟ್ರಸ್ಟ್ ಮತ್ತು ದೇವಾಂಗ ಸಂಘದಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
ವರ ಮಹಾಲಕ್ಷ್ಮೀ ಹಬ್ಬದ ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಗಂಗಾ ಪೂಜೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯ, ಮಹಾ ಸಂಕಲ್ಪ, ಪಂಚಾಮೃತ ಅಭಿಷೇಕ ಹಾಗೂ ನವಗ್ರಹ ಸಹಿತ ದುರ್ಗಾ ಹೋಮ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು. ಪೂಜಾ ಕಾರ್ಯದಲ್ಲಿ ಶಾಸಕ ಎಚ್.ಕೆ.ಸುರೇಶ್, ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದು. ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಶಾಸಕನಾಗಿ ಮತ್ತು ಸಮುದಾಯದ ಸಹೋದರನಾಗಿ ಎಲ್ಲ ಆಗು ಹೋಗುಗಳ ಬಗ್ಗೆ ನಿರಂತರವಾಗಿ ನಿಮ್ಮೊಂದಿಗೆ ಇರುತ್ತೇನೆ. ಈ ಬಾರಿ ಕ್ಷೇತ್ರದಲ್ಲಿ ಮಳೆ ಇಲ್ಲದೆ ಬರಗಾಲದ ಸ್ಥಿತಿ ಕಂಡು ಬರುತ್ತಿದೆ. ಆದರೆ ವರ ಮಹಾಲಕ್ಷ್ಮೀ ಇದಕ್ಕೆಲ್ಲ ಮುಕ್ತಿ ನೀಡಿ ತಾಲೂಕು, ಜಿಲ್ಲೆ ಮತ್ತು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗುವಂತೆ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ದೇವಾಂಗ ಟ್ರಸ್ಟ್ ಅಧ್ಯಕ್ಷ ವಸಂತ ಶೇಖರ್ ಮಾತನಾಡಿ, ಸಮುದಾಯ ಮತ್ತು ಭಕ್ತರ ಸಹಕಾರದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ತಯಾರಿ ನಡೆಯುತ್ತಿದೆ. ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ದೇವಾಂಗ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದೇವಾಂಗ ಟ್ರಸ್ಟ್ ಗೌರವಾಧ್ಯಕ್ಷ ಗಿರಿಯಪ್ಪಶೆಟ್ಟಿ, ಕಾರ್ಯಧ್ಯಕ್ಷ ಎಸ್.ಗಣೇಶ್. ಉಪಾಧ್ಯಕ್ಷ ರಾಜಶೇಖರ್. ಪ್ರಧಾನ ಕಾರ್ಯದರ್ಶಿ ಪ್ರಸಾದ್. ಖಜಾಂಚಿ ದಿನೇಶ್. ಕಾರ್ಯದರ್ಶಿ ಕೆ.ಆರ್.ಕುಮಾರ್. ಚೇತನ್ ಕುಮಾರ್ ಇತರರಿದ್ದರು.