ಜಿಲ್ಲೆ

ಚೋಳರ ಕಟ್ಟೆಯ ಕೆರೆಗೆ ವಿಷ!, ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ಕೆರೆಯೊಡಲಿಗೆ ಬಲಾಢ್ಯರ ಪಾಲಾದ ಜಾಗ

ಆನೇಕಲ್: ಚಂದಾಪುರ ಚೋಳರ ಕಟ್ಟೆಯ ಕೆರೆಗೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ತ್ಯಾಜ್ಯ ಮಿಶ್ರಿತ ನೀರು ಹರಿಯಬಿಟ್ಟಿರುವ ಪರಿಣಾಮ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದೆ.

ಚೋಳರ ಕಾಲದಲ್ಲಿ ಅಂದಿನ ಅರಸರು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿ ಎಂದು ಹೆನ್ನಾಗರ ಕೆರೆ ನಿರ್ಮಿಸಿದ್ದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಆದರೆ ಇಂತಹ ಐತಿಹಾಸಿಕ ಕೆರೆ ರಕ್ಷಣೆ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿರುವ ಪರಿಣಾಮ ಕೆರೆಯೊಡಲಿಗೆ ವಿಷಯುಕ್ತ ತ್ಯಾಜ್ಯ ಸೇರುತ್ತಿದ್ದು, ಕಾಲಕ್ರಮೇಣ ಅಂತರ್ಜಲವೂ ವಿಷವಾಗುವ ಆತಂಕ ಎದುರಾಗಿದೆ. ಕೆರೆಯಲ್ಲಿ ನೀರಿದ್ದರೂ ತ್ಯಾಜ್ಯ ಸೇರುವುದರಿಂದ ಪ್ರಯೋಜನಕ್ಕೆ ಬಾರದಂತಾಗಿದೆ.

ತ್ಯಾಜ್ಯ ಸಂಸ್ಕರಿಸಿದ ಬಳಿಕವೇ ನೀರು ಹೊರಬಿಡಬೇಕು ಎಂದು ನಿಯಮವಿದ್ದರೂ ಈ ಭಾಗದ ಕೆಲ ಕಾರ್ಖಾನೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನು ನೇರವಾಗಿ ಕೆರೆಗೆ ಹರಿ ಬಿಟ್ಟಿರುವುದು ಹಾಗೂ ಕೋಳಿ ತ್ಯಾಜ್ಯವೂ ಕೆರೆಯೊಡಲು ಸೇರುತ್ತಿದ್ದು, ಕೆರೆಯ ಮೂಲ ಸ್ವರೂಪವೇ ಬದಲಾಗಿದೆ.

ಕೆರೆ ಜಾಗ ಒತ್ತುವರಿ: ಚಂದಾಪುರದ ಚೋಳರ ಕಟ್ಟೆ ಕೆರೆ 50 ಎಕರೆಗೂ ಹೆಚ್ಚು ವಿಸ್ತೀರ್ಣವಾಗಿತ್ತು. ಆದರೆ ಬಲಾಢ್ಯರು ಕೆರೆಯ ಅಕ್ಕಪಕ್ಕದ ಜಾಗ ಕೊಂಡು ಕೆರೆಯ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದು, ಅಕ್ರಮವಾಗಿ ಬಡಾವಣೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಾಣಿಗಳಿಗೆ ಹಾನಿ: ಈ ಕೆರೆ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದರೂ ಅನಿವಾರ್ಯವಾಗಿ ರಾಸುಗಳು ಇದೇ ನೀರನ್ನು ಸೇವಿಸಬೇಕು. ಸಾಕಷ್ಟು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಸುತ್ತಮುತ್ತಲಿನ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆರೆ ರಕ್ಷಣೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆರೆ ಜಾಗವನ್ನು ಭೂ ಮಾಫಿಯಾದವರು ಒತ್ತುವರಿ ಮಾಡಿಕೊಂಡು ಅಕ್ರಮ ಬಡಾವಣೆ ನಿರ್ಮಾಣ ಮಾಡಲು ಹೊರಟಿದ್ದಾರೆ. ಕೆರೆಯ ಸರ್ವೇ ನಂ.98ರಲ್ಲಿ ಸ್ಮಶಾನವಿತ್ತು. ಈಗ ಅದನ್ನು ಸ್ಥಳೀಯ ಜನಪ್ರತಿನಿಧಿಗಳು ನಕಲಿ ದಾಖಲೆ ಸೃಷ್ಟಿಸಿ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ನಾನು ಗ್ರಾಪಂ ಅಧ್ಯಕ್ಷೆ ಆಗಿದ್ದಾಗ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ನಾಗವೇಣಿ, ಗ್ರಾಪಂ ಮಾಜಿ ಅಧ್ಯಕ್ಷೆ

ಚೋಳರ ಕಟ್ಟೆ ಕೆರೆ ಕಲುಷಿತಗೊಂಡಿರುವ ಬಗ್ಗೆ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಕೆರೆ ಅಭಿವೃದ್ಧಿಗೆ 8.5 ಕೋಟಿ ರೂ. ನೀಡಲು ಭರವಸೆ ನೀಡಿದ್ದಾರೆ. ಅನುದಾನ ಬಿಡುಗಡೆಯಾದರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು ಪುನಶ್ಚೇತಗೊಳಿಸುವ ಜತೆಗೆ ವಾಕಿಂಗ್ ಟ್ರ್ಯಾಕ್, ಕಲುಷಿತ ನೀರು ಬಾರದಂತೆ ಅದಕ್ಕೆ ಒಂದು ಘಟಕ ನಿರ್ಮಾಣ ಮಾಡಿ ಅದರಲ್ಲಿ ಸಂಸ್ಕರಣೆ ಮಾಡಿ ನಂತರ ಕೆರೆಗೆ ಹರಿಸಲು ಯೋಜನೆ ರೂಪಿಸಿದ್ದೇವೆ. ಕೆರೆಯ ಜಾಗವನ್ನು ಯಾರೇ ಒತ್ತುವರಿ ಮಾಡಿದ್ದರೂ ಸರ್ವೇ ಮಾಡಿಸಿ ತೆರವುಗೊಳಿಸಲಾಗುವುದು. ಕೃಷ್ಣಾರೆಡ್ಡಿ, ಚಂದಾಪುರ ಪುರಸಭೆ ಮಾಜಿ ಅಧ್ಯಕ್ಷ ಕೆರೆಯ ಜಾಗ ಯಾರೇ ಒತ್ತುವರಿ ಮಾಡಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ನೀರು ಕಲುಷಿತಗೊಂಡಿರುವುದರಿಂದ ಈಗಾಗಲೇ ಕಾರ್ಖಾನೆಗಳಲ್ಲಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಿಕೊಂಡು ಸಂಸ್ಕರಣೆ ಮಾಡಿ ನಂತರ ನೀರನ್ನು ಹೊರಗಡೆ ಬಿಡಿ ಎಂದು ಅವರಿಗೆ ಸೂಚಿಸಿದ್ದೇನೆ. ಬಿ.ಶಿವಣ್ಣ, ಶಾಸಕ ಕೆರೆಗಳ ಉಳಿವಿಗಾಗಿ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಆನೇಕಲ್ ತಾಲೂಕು ವ್ಯಾಪ್ತಿಯ ಕೆರೆಗಳ ರಕ್ಷಣೆಗಾಗಿ ನಿರಂತರ ಕೆಲಸ ಮಾಡಲಾಗುತ್ತಿದೆ. ಚಂದಾಪುರ ಕೆರೆ ಒತ್ತುವರಿ ತೆರವು ಕೂಡ ಮುಂದಿನ ದಿನಗಳಲ್ಲಿ ಆಗಲಿದೆ. ದಿನೇಶ್, ತಹಸೀಲ್ದಾರ್