ಜಿಲ್ಲೆ

ಚೈತನ್ಯ ತುಂಬುತ್ತಿರುವ ಶರಣ ಸಂಸ್ಕೃತಿ

ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲೇ ಹೆಸರಾದ ಶರಣ ಸಂಸ್ಕೃತಿ ಉತ್ಸವದಲ್ಲಿ ಕ್ರೀಡಾಕೂಟ ಸೇರಿ ವಿವಿಧ ಚಟುವಟಿಕೆ ಆಯೋಜಿಸುವ ಮೂಲಕ ಯುವಸಮೂಹಕ್ಕೆ ಚೈತನ್ಯ ತುಂಬುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಯದೇವ ಕಪ್’ ಹೊನಲು-ಬೆಳಕಿನ ವಿವಿಧ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಯದೇವ ಗುರುಗಳ ಸಾಮಾಜಿಕ ಕಾರ್ಯ ನಾಡಿಗೆ ತಿಳಿದಿದೆ. ಅನ್ನ, ವಸತಿ, ಜ್ಞಾನ ಸೇರಿ ತ್ರಿವಿಧ ದಾಸೋಹಗಳ ಮೂಲಕ ಸಮಾಜಮುಖಿಯಾಗಿ ಚಿತ್ರದುರ್ಗ ಸೇರಿ ನಾಡಿನ ಮಠಾಧೀಶರು ಶ್ರಮಿಸುತ್ತಿದ್ದಾರೆ. ಈ ಕಾಯಕ ಸೇವೆ ಸದಾ ಅವಿಸ್ಮರಣೀಯ ಎಂದು ಬಣ್ಣಿಸಿದರು.

ದೇಶದ ಚಿತ್ರಣ ಬದಲಿಸುವ ಅಘಾದವಾದ ಶಕ್ತಿ ಯುವಸಮೂಹಕ್ಕೆ ಇದೆ. ಹೀಗಾಗಿ ಸಾಧನೆ ಇಲ್ಲದೆ, ಸತ್ತರೆ ಸಾವಿಗೆ ಅಪಮಾನ. ಆದರ್ಶವಿಲ್ಲದೆ, ಬದುಕಿದರೆ ಜೀವಕ್ಕೆ ಅವಮಾನ ಎಂಬ ಹಿರಿಯರ ನುಡಿಯನ್ನು ಗಮನದಲ್ಲಿ ಇಟ್ಟುಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ. ರಾಜ್ಯ ಬರ ಮತ್ತು ನೆರೆಯಿಂದಾಗಿ ತತ್ತರಿಸಿದ್ದು, ನಾಡಿಗೆ ಅನ್ನದಾತರಾದ ರೈತರ ಬದುಕು ಹಸನಾಗಲಿ. ಆ ನಿಟ್ಟಿನಲ್ಲಿ ಒಂದಿಷ್ಟು ಒಳ್ಳೆಯ ಕಾರ್ಯಗಳಾಗಲಿ ಎಂದು ಆಶಿಸಿದರು.

ನಟ ಶ್ರೀನಗರ ಕಿಟ್ಟಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವದ ಎಲ್ಲ ಕಾರ್ಯಕ್ರಮ ಚೆನ್ನಾಗಿ ಆಗಲಿ. ಎಲ್ಲರ ಮನೆ-ಮನಸ್ಸು ಒಂದಾಗಿ ನಾಡು ಸಮೃದ್ಧವಾಗಲಿ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಈ ಉತ್ಸವದ ವೇಳೆ ಹೊಸ ಪ್ರಯೋಗಗಳ ಮೂಲಕ ಕಾರ್ಯಕ್ರಮ ನಡೆಸುವ ಮೂಲಕ ಜನರ ಗಮನ ಸೆಳೆಯಲಾಗುತ್ತಿದೆ. ಹೋರಾಟ, ಸಾಂಸ್ಕೃತಿಕ ಚಟುವಟಿಕೆಗಳು ಇದಕ್ಕೆ ಹೊರತಲ್ಲ ಎಂದು ಹೇಳಿದರು.

ಜಾತಿಗೊಂದು ಮಠ ಸ್ಥಾಪಿಸಿ, ಬಸವ ಪರಂಪರೆ ಎತ್ತಿಹಿಡಿಯಲು ಮುರುಘಾಮಠ ಕಾರಣವಾಗಿದೆ. ಚಿತ್ರದುರ್ಗದ ಭವ್ಯ ಇತಿಹಾಸ ಪರಿಚಯಿಸುವ, ಹಿರಿಯ ಗುರುಗಳ ತತ್ವಾದರ್ಶಗಳ ಮೂಲಕ ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಶ್ರೀಮಠದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಜಯದೇವ ಶ್ರೀಗಳ ಇತಿಹಾಸ ಪ್ರದರ್ಶನ: ಜಯದೇವ ಶ್ರೀಗಳು ನಡೆದುಬಂದ ಹಾದಿ, ನಾಡಿಗೆ ನೀಡಿರುವ ಸಾಮಾಜಿಕ ಕಾರ್ಯ, ಕರ್ನಾಟಕ ಏಕೀಕರಣ, ಮಹಾತ್ಮಗಾಂಧಿ ಅವರು ಭೇಟಿಯಾದ ಸನ್ನಿವೇಳ ಒಳಗೊಂಡು ಅವರ ಇತಿಹಾಸ ಸಾರುವ ದೃಶ್ಯಾವಳಿಯನ್ನು ಇದೇ ವೇಳೆ ವರ್ಣಮಯ ಲೇಸರ್ ಲೈಟ್‌ಗಳ ಮೂಲಕ ಪ್ರದರ್ಶಿಸಲಾಯಿತು. ಅಂಜನಾ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ವಿವಿಧ ಬಣ್ಣದ ಪಟಾಕಿಗಳ ಸದ್ದು ನೆರೆದಿದ್ದ ಪ್ರೇಕ್ಷಕರ ಹೃನ್ಮನ ತಣಿಸಿತು.

ಇದೇ ವೇಳೆ ಕರಾಟೆ ಮಾಸ್ಟರ್ ಪ್ರವೀಣ್ ರಂಕ, ಕರಾಟೆ ಕುಸ್ತಿಪಟು ಅಂಜು, ಕರೋನಾ ವಾರಿಯರ್ಸ್‌ಗಳಾದ ಲಿಂಗರಾಜು, ದಿನೇಶ್, ಗಿರೀಶ್ ಅವರನ್ನು ಸನ್ಮಾನಿಸಲಾಯಿತು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕ್ರೀಡಾ ಜಾತ್ರೆಯ ನೇತೃತ್ವ ವಹಿಸಿದ್ದರು. ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಹೆಬ್ಬಾಳು ಮಹಂತ ರುದ್ರೇಶ್ವರ ಶ್ರೀ, ಬಸವಪ್ರಭು ಶ್ರೀ, ಶ್ರೀಮಠದ ಆಡಳಿತ ಸಮಿತಿ ಸದಸ್ಯ ಬಸವಕುಮಾರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸಂಸದ ಗೋವಿಂದ ಎಂ ಕಾರಜೋಳ, ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ, ನಿರ್ಮಾಪಕ ಛಲವಾದಿ ಕುಮಾರ್, ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಕಾಂಗ್ರೆಸ್ ಮುಖಂಡರಾದ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಓ.ಶಂಕರ್, ನಿವೃತ್ತ ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಮುಂಡರಗಿ ನಾಗರಾಜ್, ಲಗ್ಗೆರೆ ನಾರಾಯಣಸ್ವಾಮಿ ಇತರರಿದ್ದರು.