ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ದೀಪಾವಳಿ ಉತ್ಸವ ಶನಿವಾರ ರಾತ್ರಿ ವೈಭವದಿಂದ ನೆರವೇರಿತು.
ಸ್ವಾಮಿ ಸನ್ನಿಧಿಯ ಪರಿಚಾರಕ ಎಂ.ಎನ್ ಪಾರ್ಥಸಾರಥಿ ಕುಟುಂಬ ಅನೂಚಾನ ಪರಂಪರೆಯಂತೆ ಉತ್ಸವದ ಕೈಂಕರ್ಯ ನೆರವೇರಿಸಿತು. ಮೊದಲು ನಡೆದ ಉತ್ಸವದಲ್ಲಿ ಪರಿಚಾರಕರ ಪುಷ್ಪ ಕೈಂಕರ್ಯ ನಡೆದರೆ, ನಂತರ ಬಲಿಪಾಡ್ಯಮಿ ಅಂಗವಾಗಿ ದೊಡ್ಡ ಶೇಷವಾಹನೋತ್ಸವ ವೈಭವದಿಂದ ನೆರವೇರಿತು. ಕೈಂಕರ್ಯಪರರು ಸ್ಥಾನೀಕರು ವೈವಿಧ್ಯಮಯ ಪಟಾಕಿಗಳನ್ನು ಸ್ವಾಮಿಯ ಉತ್ಸವದ ವೇಳೆ ಸಿಡಿಸಿ ಸ್ವಾಮಿಯ ದೀಪಾವಳಿ ಉತ್ಸವದಲ್ಲಿ ಪಾಲ್ಗೊಂಡರು.
ದೀಪಾವಳಿಯಂದು ಮೇಲುಕೋಟೆಗೆ ಭಕ್ತಸಾಗರವೇ ಹರಿದು ಬಂದಿತ್ತು ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಇಡೀ ದಿನ ವಿವಿಧ ವಾಹನಗಳಲ್ಲಿ ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಲ್ಲಿ ಸರತಿಯಲ್ಲಿ ಸಾಗಿ ದರ್ಶನ ಪಡೆದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಖುದ್ದು ನಿಂತು ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು. ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ ಪರಿಚಾರಕ ಎಂ.ಎನ್.ಪಾರ್ಥಸಾರಥಿ ಕೈಂಕರ್ಯಪರರು ಮತ್ತು ಸಿಬ್ಬಂದಿ ಸಹಕಾರದಲ್ಲಿ ಧಾರ್ಮಿಕ ಕೈಂಕರ್ಯ ನಡೆಸಿದರು. ಮೇಲುಕೋಟೆ ಪೊಲೀಸರು ಭದ್ರತೆ ನೀಡಿದ್ದರು. ಯತಿರಾಜದಾಸರ್ ಗುರುಪೀಠ ಹಾಗೂ ಚಿನ್ನಜೀಯರ್ ಮಠದಲ್ಲಿ ಸಾವಿರಾರು ಭಕ್ತರಿಗೆ ಸಿಹಿಪಾಯಸದೊಂದಿಗೆ ಅನ್ನದಾನ ಮಾಡಲಾಯಿತು ನರಕ ಚತುದರ್ಶಶಿ ಉತ್ಸವವನ್ನು ಸವಿತಾ ಸಮಾಜದವರು ತಮ್ಮ ಗುರುಗಳ ನೇತೃತ್ವದಲ್ಲಿ ವೈಭವದಿಂದ ನಡೆಸಿದರು. ದೀಪಾವಳಿಯ ಮೂರು ದಿನಗಳಂದು ಮೇಲುಕೋಟೆಗೆ ಭಕ್ತಸಾಗರವೇ ಹರಿದುಬಂದಿತ್ತು.
ಪಾರ್ಕಿಂಗ್ ಅವ್ಯವಸ್ಥೆ: ದೀಪಾವಳಿಯ ನರಕಚತುರ್ದಶಿಯಂದು ದೇವಾಲಯ ಸುತ್ತ ಮತ್ತು ಉತ್ಸವ ಬೀದಿಗಳಲ್ಲಿ ಭಕ್ತರವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದಾಗಿ ಚೆಲುವನಾರಾಯಣಸ್ವಾಮಿಯ ಉತ್ಸವಕ್ಕೇ ತೊಂದರೆಯಾಯಿತು. ಶನಿವಾರ ರಾತ್ರಿ ರಸ್ತೆಯ ಎರಡೂ ಬದಿ ಭಕ್ತರು ಅಡ್ಡಾದಿಡ್ಡಿಯಾಗಿ ವಾಹನನಿಲುಗಡೆಮಾಡಿ ದರ್ಶನಕ್ಕೆ ಹೋಗಿದ್ದರಿಂದ ಸ್ವಾಮಿಯ ಶೇಷವಾಹನೋತ್ಸವ ಸುಗಮವಾಗಿ ಸಾಗಲು ಅಡ್ಡಿಯಾಯಿತು. ಶ್ರೀಪಾದ ಮತ್ತು ಬಂಡಿಕಾರರು ಪ್ರಯಾಸಪಡುವಂತಾಯಿತು.