ಬೆಳಗಾವಿ: ನಕಲಿ ಕಂಪನಿ, ಬ್ಯಾಂಕ್ ಅಕೌಂಟ್ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗಾವಿ ನಗರದಲ್ಲಿ ತಮಿಳುನಾಡಿನ ಚೆನ್ನೈ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬೆಳಗಾವಿ ನಗರದ ಅನಿಲ್ ಕೊಲ್ಲಾಪುರ, ರೋಹನ್ ಕಾಂಬಳೆ ಹಾಗೂ ಸರ್ವೇಶ ಕಿವಿ ಬಂಧಿತರು.
ಘಟನೆ ವಿವರ: ಬೆಳಗಾವಿ ನಗರದಲ್ಲಿ ನಕಲಿ ಕಂಪನಿ ಸೃಷ್ಟಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕರೆಂಟ್ ಖಾತೆೆ ತೆರೆದು ಬೆಂಗಳೂರು, ತುಮಕೂರು, ತಮಿಳುನಾಡು ಸೇರಿ ವಿವಿಧ ಭಾಗಗಳಲ್ಲಿ ಜನರಿಗೆ ವಂಚನೆ ಮಾಡಿದ್ದಾರೆ. ಇವರ ಬ್ಯಾಂಕ್ ಖಾತೆಯಲ್ಲಿ 27 ವಂಚನೆ ಪ್ರಕರಣ ಬೆಳಕಿಗೆ ಬಂದಿವೆ. ಬೆಂಗಳೂರು ಭಾಗದ ಜನರಿಗೆ ಹೆಚ್ಚು ವಂಚನೆ ಮಾಡಿರುವುದು ಚೆನ್ನೈ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಚೆನ್ನೈ ಪೊಲೀಸರು ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಚೆನ್ನೈಗೆ ಕರೆದುಕೊಂಡು ಹೋಗಿದ್ದಾರೆ. ಸೈಬರ್ ಅಪರಾಧಕ್ಕೆ ಯಾವುದೇ ಗಡಿ ಇರುವುದಿಲ್ಲ. ಹೀಗಾಗಿ ಚೆನ್ನೈ ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ನಾಗರಿಕರು ಇಂಟರ್ನೆಟ್ ಮೂಲಕ ಬರುವ ಲಿಂಕ್ ನೇರವಾಗಿ ಓಪನ್ ಮಾಡಬಾರದು ಎಂದು ಬೆಳಗಾವಿ ನಗರದ ಪೊಲೀಸ್ ಆಯುಕ್ತ ಬೋರಸೆ ಭೂಷಣ ಗುಲಾಬರಾವ್ ಹೇಳಿದರು.