ಜಿಲ್ಲೆ

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯಚರಣೆ ಚುರುಕು

Kodagu

ಶನಿವಾರಸಂತೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರಿಂದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯಚರಣೆ ಚುರುಕುಗೊಳ್ಳುತ್ತಿದೆ.


ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಅಧಿಕಾರಿಗಳು ಮತಗಟ್ಟೆ ಪರಿಶೀಲನೆ ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯವನ್ನು ಬಿಗಿಗೊಳಿಸಿದ್ದಾರೆ. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಈಗಾಗಲೆ ಕೊಡಗು-ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಶನಿವಾರಸಂತೆ-ಅರಕಲಗೂಡು-ಹಾಸನ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಹಿಪ್ಪಲಿ ತಪಾಸಣಾ ಗೇಟ್, ಕೊಡ್ಲಿಪೇಟೆಯಿಂದ ಅರಕಲಗೂಡು ಕಡೆಗೆ ತೆರಳುವ ರಸ್ತೆಯ ನಿಲುವಾಗಿಲು ತಪಾಸಣಾ ಗೇಟ್, ಕೊಡ್ಲಿಪೇಟೆಯಿಂದ ಕೆಂಚಮನಕೋಟೆ-ಸಕಲೇಶಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಶಾಂತಪುರ ತಪಾಸಣಾ ಗೇಟ್‌ಗಳಲ್ಲಿ ತಪಾಸಣೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೊಡಗಿನಿಂದ ಹಾಸನ ಕಡೆಗೆ ಹೋಗುವ ಮತ್ತು ಹಾಸನದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಗಳಲ್ಲಿನ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸೆಕ್ಟರ್ ಅಧಿಕಾರಿ ಯಾದವ್ ಬಾಬು, ಉಪ ತಹಸೀಲ್ದಾರ್ ನಾಗರಾಜು, ಗ್ರಾಮ ಆಡಳಿತಾಧಿಕಾರಿ ವಾಣಿ ಹಾಗೂ ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.