ನಾಪೋಕ್ಲು: ಕೊಡಗು ದಕ್ಷಿಣ ಕನ್ನಡದ ಜಿಲ್ಲೆಗಳ ಗಡಿ ಭಾಗವಾದ ಚೆಂಬು ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಿರಂತರ ಕಾಣಿಸಿಕೊಳ್ಳುತ್ತಿದ್ದು, ಅವುಗಳ ದಾಂಧಲೆಗೆ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆ, ಮರ ಗಿಡಗಳು ನಾಶವಾಗಿವೆ.
ಕೆಲವು ತಿಂಗಳುಗಳಿಂದ ಕಾಡಾನೆಗಳ ಹಿಂಡು ಗ್ರಾಮದ ತೋಟಗಳಿಗೆ ನಿರಂತರ ಲಗ್ಗೆ ಇಟ್ಟು ದಾಂಧಲೆ ನಡೆಸಿ ಬೆಳೆಗಳನ್ನು ನಾಶಪಡಿಸಿವೆ. ಚೆಂಬು ಗ್ರಾಮದ ಸುತ್ತಮುತ್ತಲಿನ ಊರುಗಳಾದ ಊರುಬೈಲು, ದಬ್ಬಡ್ಕ ಆನೆಹಳ್ಳ, ಕಾಂತುಬೈಲುಗಳಲ್ಲಿ ಹಲವು ದಿನಗಳಿಂದ ಆನೆಗಳು ಕೃಷಿ ಭೂಮಿಗೆ ನುಗ್ಗಿ ಹಾನಿ ಮಾಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ಗ್ರಾಮದಲ್ಲಿ ಈ ರೀತಿ ಆನೆಗಳ ಹಾವಳಿಯಿಂದ ಕೃಷಿಕರು ಭಾರಿ ನಷ್ಟ ಅನುಭವಿಸುತ್ತಿದ್ದು, ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಇತ್ತ ಗಮನಹರಿಸಿ ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕಾಗಿದೆ.