ಜಿಲ್ಲೆ

ಚುರುಕಾಗಿ ಕಾರ್ಯನಿರ್ವಹಿಸಿ

ಬಾಗಲಕೋಟೆ: ಲೋಕಸಭಾ ಚುನಾವಣೆ-೨೦೨೪ರ ಹಿನ್ನಲೆಯಲ್ಲಿ ನೇಮಕಗೊಂಡ ಪ್ರತಿಯೊಂದು ತಂಡಗಳ ನಡುವೆ ಸಹಭಾಗಿತ್ವ ಅಗತ್ಯವಾಗಿದ್ದು, ಇದರ ಜೊತೆಗೆ ಚುರುಕಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಸೂಚನೆ ನೀಡಿದರು.

ನಗರಸಭೆ ನೂತನ ಸಭಾಭವನದಲ್ಲಿ ಬಾಗಲಕೋಟೆ ಮತಕ್ಷೇತ್ರದ ಚುನಾವಣಾ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ನೀಡಿದ ನಿರ್ದೇಶನಗಳನ್ನು ಪಾಲಿಸುವ ಕೆಲಸವಾಗಬೇಕು. ಚುನಾವಣೆ ಹಿನ್ನಲೆಯಲ್ಲಿ ನೇಮಕಗೊಂಡ ವಿಡಿಯೋ ಸರ್ವೇಲನ್ಸ್ ತಂಡ, ವಿಡಿಯೋ ವೀವಿಂಗ್ ಸೇರಿದಂತೆ ವಿವಿಧ ತಂಡಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಅಂದಾಗ ಮಾತ್ರ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಎಂದರು.

ಪ್ರತಿಯೊಂದು ತಂಡಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಿ ಪ್ರತಿದಿನದ ವೆಚ್ಚದ ವಿವರಗಳನ್ನು ನಿಖರವಾಗಿ ಸಲ್ಲಿಸಬೇಕು. ಪ್ರತಿಯೊಂದು ತಂಡದವರು ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪ್ರಕರಣ ದಾಖಲಿಸುವಾಗ ಪ್ರತಿಯೊಂದು ಮಾಹಿತಿಯನ್ನು ಗನನೆಗೆ ತೆಗೆದುಕೊಳ್ಳಬೇಕು. ಪ್ರತಿಯೊಂದು ಅಂಶಗಳು ರೆಕಾರ್ಡ ಆಗಿರಬೇಕು. ಚುನಾವಣಾ ವೆಚ್ಚದಿಂದ ಯಾವುದೇ ವೆಚ್ಚ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಮೂಲಕ ಚುನಾವಣೆ ಕಾರ್ಯ ಯಶಸ್ವಿಯಾಗಿ ನಡೆಯುವಂತೆ ಮಾಡಬೇಕು ಎಂದರು.

ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು ೨೬೭ ಮತಗಟ್ಟೆಗಳು ಬರುತ್ತಿದ್ದು, ಪ್ರತಿಯೊಂದು ಮತಗಟ್ಟೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಏನಾದರೂ ದುರಸ್ಥಿ ಇದ್ದಲ್ಲಿ ಪಟ್ಟಿ ಮಾಡಿ ಮೂರು ದಿನಗಳಲ್ಲಿ ಸಲ್ಲಿಸಬೇಕು. ಚುನಾವಣೆಗೆ ಸಂಬಂಸಿದ ದೂರು ನಿರ್ವಹಣೆ ಕೇಂದ್ರ ಹಾಗೂ ಸಿ-ವಿಜಿಲ್ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಾಗಲಕೋಟೆ ಮತಕ್ಷೇತ್ರದಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳ ಮಾಹಿತಿ ಇಟ್ಟುಕೊಂಡು ಆ ಭಾಗದಲ್ಲಿ ಹೆಚ್ಚಿನ ಮತದಾನವಾಗುವಂತೆ ಮಾಡಬೇಕು. ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಂದು ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ಪ್ರೇರಣೆ ನೀಡಬೇಕು. ಚುನಾವಣಾ ಆಯೋಗವು ವಿಶೇಷ ಚೇತನರಿಗೆ ಪೂರಕ ಸೌಲಭ್ಯಗಳನ್ನು ಒದಗಿಸಲು ತಿಳಿಸಿದ್ದು, ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕು ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಯೋಜನಾ ನಿರ್ದೇಶಕ ಶಿವಪುರಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.