ಜಿಲ್ಲೆ

ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧಾರ:ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ

ಹಾಸನ: ರಾಜಕಾರಣಿಯಾಗಿ ಮುಂದುವರಿಯುವ ಆಲೋಚನೆ ನನಗಿಲ್ಲ. ಚುನಾವಣೆಯಿಂದ ಹಿಂದೆ ಸರಿಯಬೇಕೆಂದು ನಿರ್ಧರಿಸಿದ್ದೇನೆ ಎಂದು ಕೇಂದ್ರ ಸಾಮಾಜಿಕ ಮತ್ತು ನ್ಯಾಯ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಮಾದಿಗ ಮುನ್ನಡೆ’ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜಕಾರಣ ಎಂಬುದು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದು, ಚುನಾವಣೆಯಿಂದ ಹಿಂದೆ ಸರಿಯಬೇಕೆಂದು ನಿರ್ಧರಿಸಿದ್ದೇನೆ. ನೂರಾರು ವರ್ಷಗಳಿಂದ ಶೋಷಣೆಯಲ್ಲೇ ಬದುಕುತ್ತಿರುವ ನನ್ನ ಸಮಾಜಕ್ಕೆ ಒಳ್ಳೆಯದಾಗಬೇಕು. ಆದರೆ ಇವತ್ತಿನ ರಾಜಕಾರಣ ನನ್ನಂತವರಿಗೆ ಅಲ್ಲ ಎಂಬುದು ಮನದಟ್ಟಾಗಿದೆ. ಆದ್ದರಿಂದಲೇ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದೇನೆ. ಆದರೆ, ಒಳಮೀಸಲಾತಿ ವಿಚಾರದಲ್ಲಿ ಯಾರೇ ಅಡ್ಡ ಬಂದರೂ ಅವರಿಗೆ ಪ್ರತ್ಯುತ್ತರ ನೀಡುವುದು ನನಗೆ ಗೊತ್ತಿದೆ ಎಂದರು.
ಒಳಮೀಸಲಾತಿ ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದೆ ತೆಗೆಯುವ ಮಾತೇ ಇಲ್ಲ. ಈ ವಿಷಯವಾಗಿ ಯಾರೇ ಅಡ್ಡ ಬಂದರೂ ಅವರ ಮುಖಕ್ಕೆ ಮುಖ ಕೊಟ್ಟು ಉತ್ತರ ಕೊಡುತ್ತೇನೆ. ಈ ವಿಚಾರದಲ್ಲಿ ನಾನು ಬುಲ್ಡೋಜರ್ ರೀತಿ ಕೆಲಸ ಮಾಡೇ ಮಾಡುತ್ತೇನೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ ಖಂಡಿತ ಅದು ಸರ್ವನಾಶವಾಗುತ್ತದೆ ಎಂದು ಭವಿಷ್ಯ ನುಡಿದ ಅವರು, ಮಾದಿಗ ಮುನ್ನಡೆ ಕಾರ್ಯಕ್ರಮ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿದೆ ಎಂಬ ಆರೋಗಳೆಲ್ಲ ಸುಳ್ಳು. ತಳವರ್ಗದವರ ಪರವಾಗಿ ನಿಲ್ಲಲು ಯಾವ ಪಕ್ಷ ಆಸಕ್ತಿ ತೋರುತ್ತದೆಯೋ ಆ ಪಕ್ಷಕ್ಕೆ ಸಮಾಜದ ಬೆಂಬಲವಿರುತ್ತದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.
ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಇದುವರೆಗೆ ಅವರಿಂದ ಏಕೆ ಸಾಧ್ಯವಾಗಿಲ್ಲ. ಕಳೆದ ವರ್ಷ ಹುಬ್ಬಳಿಯಲ್ಲಿ ಹಮ್ಮಿಕೊಂಡಿದ್ದ ಮಾದಿಗ ಸಮಾವೇಶಕ್ಕೆ ಬರುತ್ತಿದ್ದ ಒಂಬತ್ತು ಜನರು ಅಪಘಾತದಲ್ಲಿ ಮೃತಪಟ್ಟಾಗ ಇದೇ ಸಿದ್ದರಾಮಯ್ಯ ಏನು ಹೇಳಿದ್ದರು ಎಂಬುದು ರಾಜ್ಯದ ಜನತೆಗೆ ನೆನಪಿದೆ. ತಾವೊಬ್ಬ ಸಮಾಜವಾದಿ, ಮಾನವತಾವಾದಿ ಎಂದು ಭಾಷಣ ಮಾಡುವ ಮುಖ್ಯಮಂತ್ರಿಗೆ ಮಾದಿಗರ ಕೂಗು ಕೇಳುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸಿಎಂ ಕ್ಷಮೆ ಕೇಳಬೇಕಿತ್ತು:
ಬರಗಾಲ ಬರಲೆಂದು ರೈತರು ಬಯಸುವುದಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದಾಗ ಅದಕ್ಕೆ ಕ್ಷಮೆ ಕೇಳುವ ಸೌಜನ್ಯವನ್ನೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿಲ್ಲ. ತಮ್ಮದೇ ಸಂಪುಟದ ಸಚಿವ ಈ ರೀತಿ ಹೇಳಿಕೆ ನೀಡಿದರೂ ಸುಮ್ಮನಿರುವ ಮುಖ್ಯಮಂತ್ರಿಯಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯವೆಂದು ಬೇಸರ ವ್ಯಕ್ತಪಡಿಸಿದರು.