ಜಿಲ್ಲೆ

ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವೆ: ಸುಮಲತಾ ಅಂಬರೀಷ್

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವಿಜಯನಗರದಲ್ಲಿ ನೂತನ ನಾಮಕರಣ ಮಾಡಿರುವ ‘ಡಾ.ಎಂ.ಎಚ್.ಅಂಬರೀಷ್ ರಸ್ತೆ’ ನಾಮಫಲಕವನ್ನು ಶನಿವಾರ ಸಂಜೆ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಈವರೆಗೂ ತಟಸ್ಥವಾಗಿಯೇ ಇದ್ದೀನಿ. ಎಲ್ಲರೂ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ. ಅಂಬರೀಷ್ ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಗೊತ್ತಿಲ್ಲ. ಆದರೆ, ಮಂಡ್ಯದ ಎಲ್ಲ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವ ಒಲವು ಇದೆ. ಈ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.


ಚುನಾವಣೆಗೆ ಸ್ಪರ್ಧೆ ಮಾಡುವುದು ಪುತ್ರ ಅಭಿಷೇಕ್‌ಗೆ ಬಿಟ್ಟದ್ದು. ನಾನು ಚುನಾವಣೆಗೆ ಬಂದಿದ್ದೇ ಆಕಸ್ಮಿಕ. ಹಣೆಬರಹದಲ್ಲಿ ಏನು ಇರುತ್ತದೆಯೋ, ಅದುವೇ ಆಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ವಿಜಯನಗರದ ಕಾಳಿದಾಸ ರಸ್ತೆಯಿಂದ ಹೆಬ್ಬಾಳು ಬಳಿಯ ರಿಂಗ್‌ರೋಡ್‌ಗೆ ಸಂಪರ್ಕಿಸುವ ನಡುವಿನ 3.5 ಕಿ.ಮೀ ರಸ್ತೆಗೆ ಅಂಬರೀಶ್ ಹೆಸರು ನಾಮಕರಣ ಮಾಡಿದ್ದು ಸಂತಸದ ಕ್ಷಣವಾಗಿದೆ.

ಅಂಬರೀಷ್‌ಗೆ ಮೈಸೂರು ಇಷ್ಟವಾದ ಸ್ಥಳ. ಅಂಬರೀಷ್ ಕುಟುಂಬದವರೂ ಇಲ್ಲಿಯೇ ಇದ್ದಾರೆ. ಅಭಿಮಾನಿಗಳ ಬೇಡಿಕೆಯಿಂದ ಈ ರಸ್ತೆಗೆ ಹೆಸರು ಇಡಲಾಗಿದೆ ಎಂದು ಸಂತಸವ್ಯಕ್ತಪಡಿಸಿದರು.


ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ನಾನೇ ಪತ್ರ ಬರೆದಿದ್ದೇನೆ. ಅವರ ಹೆಸರು ಸೂಕ್ತವಾಗಿದೆ ಎಂದರು.
ನಟ ಅಭಿಷೇಕ್ ಅಂಬರೀಷ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮದ್ದೂರು ಕ್ಷೇತ್ರದಲ್ಲಿ ನನ್ನ ಹೆಸರು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.


ಅವಕಾಶ ಕೊಟ್ಟರೆ ಜನಸೇವೆ:

ಜನಸೇವೆಗೆ ಮಾಡಲು ಬಂದಿದ್ದು, ರಾಜಕಾರಣದಿಂದಲೇ ಜನರ ಸೇವೆ ಮಾಡಬೇಕಾ? ಅಭಿಮಾನಿಗಳಿಂತ ಹೆಚ್ಚು ಪವರ್(ಅಧಿಕಾರ) ಯಾವುದೂ ಇಲ್ಲ. ಜನರು ಅವಕಾಶ ಕೊಟ್ಟರೆ ಜನಸೇವೆ ಮಾಡುತ್ತೇವೆ ಎಂದರು.


ಪ್ರಮುಖ ರಸ್ತೆಗೆ ನಮ್ಮ ತಂದೆಯ ಹೆಸರು ಹೆಸರಿಟ್ಟಿರುವುದು ತುಂಬ ಖುಷಿಯಾಗಿದೆ. ಈ ರೀತಿಯ ಕಾರ್ಯಕ್ರಮದಿಂದ ಅಂಬರೀಷ್ ಮೇಲೆ ಜನರು ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು. ಶಾಸಕ ಎಲ್ ನಾಗೇಂದ್ರ, ಮೇಯರ್ ಶಿವಕುಮಾರ್ ಇತರರು ಇದ್ದರು.