ಕಾನಹೊಸಹಳ್ಳಿ: ಸಾರ್ವಜನಿಕರ ಸಮಸ್ಯೆಗಳಿಗೆ ಬೆನ್ನು ತೋರಿಸದೆ, ಊರುಗೋಲಾಗುವುದು ನನ್ನ ಧ್ಯೇಯವಾಗಿದೆ. ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡುವ ಉದ್ದೇಶದಿಂದ ಗ್ರಾಪಂವಾರು ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಚಿರತಗುಂಡು ಗ್ರಾಮದಲ್ಲಿ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕ್ಷೇತ್ರದಲ್ಲಿ 216 ಹಳ್ಳಿಗಳಿದ್ದು, ಎಲ್ಲವೂ ಒಂದೇ ಸಲಕ್ಕೆ ಅಭಿವೃದ್ಧಿ ಆಗಲ್ಲ. ಹೀಗಾಗಿ, ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಪಂ ಕೇಂದ್ರದಲ್ಲಿ ಪ್ರತಿ ವಾರ ಕಾರ್ಯಕ್ರಮ ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ತಿಳಿಸಿದರು.
ಚಿರತಗುಂಡು ಗ್ರಾಪಂ ವ್ಯಾಪ್ತಿಯ ಮೂರು ಹಳ್ಳಿಗಳ ಅಭಿವೃದ್ಧಿಗೆ 3.66 ಕೋಟಿ ರೂ. ನೀಡಲಾಗಿದೆ. ತಾಲೂಕಿನ 136 ಹಳ್ಳಿಗಳಿಗೆ ಅನುದಾನ ಒದಗಿಸಿದ್ದು, ಕಾಮಗರಿಗೆ ಶೀಘ್ರ ಚಾಲನೆ ನೀಡಲಾಗುವುದು. ಹಳ್ಳಿಗಳಲ್ಲಿ ಸಹೋದರರ ನಡುವೆ ಭೂವ್ಯಾಜ್ಯಗಳಿದ್ದು, ಪೋತಿ, ಪೋಡಿ ಮೂಲಕ ಪರಿಹರಿಸಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.
ಕೂಡ್ಲಿಗಿ ತಾಲೂಕು ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಜನರಿಗೆ ಅಭಿವೃದ್ದಿ ಬೇಕು. ಇದರಿಂದಾಗಿ ಚುನಾವಣೆಯಲ್ಲಿ ರಾಜಕೀಯ ಮಾಡೋಣ ಉಳಿದಂತೆ ಆರ್ಥಿಕ, ಶೈಕ್ಷಣಿಕ ಅಭಿವೃದಿಗೆ ಕೆಲಸ ಮಾಡೋಣ. ಕೆಕೆಆರ್‌ಡಿಬಿ ಅನುದಾನದಲ್ಲಿ 150ಕ್ಕೂ ಹೆಚ್ವು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಒಂದು ಸಾವಿರಕ್ಕೂ ಹೆಚ್ವು ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ. ಗ್ರಾಮಾಂತರ ಪ್ರದೇಶದ ಜನರ ಸಮಸ್ಯೆಗಳಿಗೆ ಪಿಡಿಒ, ಬಿಲ್ ಕಲೆಕ್ಟರ್ ಸ್ಪಂದಿಸಬೇಕು ಎಂದು ತಿಳಿಸಿದರು.
ಗಂಗಾ ಕಲ್ಯಾಣ, ನೇರ ಸಾಲ, ಇತ್ಯಾದಿ ಸರ್ಕಾರಿ ಸೌಲಭ್ಯಗಳಿಗೆ ನನ್ನನ್ನು ನೇರವಾಗಿ ಸಂಪರ್ಕಿಸಬೇಕು. ಮಧ್ಯವರ್ತಿಗಳಿಗೆ ಹಣ ನೀಡಿ ತೊಂದರೆಗೆ ಒಳಗಾಗದಿರಿ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು. ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕರ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದರು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಟಿಎಚ್‌ಒ ಡಾ.ಪ್ರದೀಪ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ರತ್ನಮ್ನಬಸಣ್ಣ, ಗೌಡ್ರುಶಿವಣ್ಣ, ಎಂ.ಬಿ.ಮಂಜಣ್ಣ, ದಿಬ್ಬದಹಳ್ಳಿ ಬಸಣ್ಣ, ಜಿ.ಬಿ.ಹಟ್ಟಿ ಬಸಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವಿ.ತಮ್ಮಣ್ಣ, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಕೆ.ಪಿ.ಪಾಲಯ್ಯ, ನಾಗರಾಜ, ಬೊಮ್ಮಯ್ಯ, ಎಕ್ಕೆಗುಂದಿ ನಾಗರಾಜ, ಎಸ್ಡಿಎಂಸಿ ಅಧ್ಯಕ್ಷೆ ಮಲ್ಲಮ್ಮ, ಗವಿಯಪ್ಪ, ತಳವಾರ ಶರಣಪ್ಪ, ನಿವೃತ್ತ ಇಒ ಬಸಣ್ಣ ಇದ್ದರು.