ಜಿಲ್ಲೆ

ಚುನಾವಣೆಗೆ ಸ್ಪರ್ಧಿಸಿದವರ ಮನೆ ಹಾಳಾಗಿ ಹೋಗುತ್ತದೆ

ಮೈಸೂರು: ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಚುನಾವಣೆಗೆ ಸ್ಪರ್ಧಿಸಿದವರ ಮನೆ ಹಾಳಾಗಿ ಹೋಗುತ್ತದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಳವಳ ವ್ಯಕ್ತಪಡಿಸಿದರು.


ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಸೈನಿಕರ ರೀತಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.


ಪಕ್ಷದಲ್ಲಿ ಹುದ್ದೆ ತೆಗೆದುಕೊಂಡು ಕೆಲವರು ನಯಾಪೈಸೆ ಸಂಘಟನೆಯ ಕೆಲಸ ಮಾಡಲ್ಲ. ಪಕ್ಷಕ್ಕೆ ವೋಟ್ ತರುವ ಪ್ರಯತ್ನವನ್ನೂ ಮಾಡಲ್ಲ. ಕಚೇರಿಯಲ್ಲಿ ಕುಳಿತು ಕಾಲಕಳೆದು ಹೋಗುತ್ತಾರೆ. ಇಂತಹವರಿಂದ ಪಕ್ಷಕ್ಕೆ ಪ್ರಯೋಜನವಿಲ್ಲ. ಹೀಗಾದರೆ, ಚುನಾವಣೆಗೆ ಸ್ಪರ್ಧಿಸಿದವರ ಮನೆ ಹಾಳಾಗಿ ಹೋಗುತ್ತದೆ. ಅನ್ಯ ಪಕ್ಷದವರೊಂದಿಗೆ ಹೊಂದಾಣಿಕೆ, ನಾಟಕ, ಆಟಗಳನ್ನೆಲ್ಲ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ. ಕಾಂಗ್ರೆಸ್ ಸರ್ಕಾರ ಬಂದಾಗ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದರು.


ಕೃಷ್ಣರಾಜ ಕ್ಷೇತ್ರದಲ್ಲಿ ನಿತ್ಯ ಪಾದಯಾತ್ರೆ ಮಾಡುತ್ತಿರುವೆ. ಅದೇ ಕೇರಿಯಲ್ಲಿ ಪಕ್ಷದ ವಿವಿಧ ಸ್ಥಾನದಲ್ಲಿ ಇರುವವರು, ಕಾರ್ಯಕರ್ತರು, ಸ್ಥಳೀಯ ಮುಖಂಡರು ಜತೆಗೆ ಬರಲ್ಲ. ಪಕ್ಷದ ಕಚೇರಿಯಲ್ಲೇ ಗೂಟಾ ಹೊಡೆದುಕೊಂಡು ಕುಳಿತಿರುತ್ತಾರೆ. ಇದು ಸರಿಯಲ್ಲ. ಪಕ್ಷದ ಪರ ಕೆಲಸ ಮಾಡಿ. ಅದನ್ನು ಗುರುತಿಸಿ ಭವಿಷ್ಯದಲ್ಲಿ ವಿವಿಧ ಸ್ಥಾನಮಾನಗಳು ದೊರೆಯಲಿವೆ. ವೈಯಕ್ತಿಕ ಜೀವನಕ್ಕೂ ಅನುಕೂಲವಾಗಲಿದೆ ಎಂದರು.


ಪ್ರತಿಯೊಬ್ಬ ಕಾರ್ಯಕರ್ತ 10 ಮನೆಗಳಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಬೇಕು ಎಂದರು.


ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಅನ್ನು ಉಚಿತ ನೀಡುವ ‘ಗೃಹಜ್ಯೋತಿ, ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮೀ’, ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವ ‘ಅನ್ನಭಾಗ್ಯ’, ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ., ಡಿಪ್ಲೋಮಾ ಮಾಡಿದವರಿಗೆ 1500 ರೂ. ನೀಡುವ ‘ಯುವನಿಧಿ’ ಪಕ್ಷದ ಭರವಸೆಯಾಗಿದ್ದು, ಅಧಿಕಾರಕ್ಕೆ ಬಂದ ಬಳಿ ಇದನ್ನು ಜಾರಿ ಮಾಡುವುದು ನಿಶ್ಚಿತ ಎಂದರು.


3.85 ಲಕ್ಷ ಕೋಟಿ ರೂ.ಗಳ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 4 ಗ್ಯಾರಂಟಿಗಳ ಜಾರಿಗೆ 35 ಸಾವಿರ ಕೋಟಿ ರೂ. ಸಾಕಾಗಲಿದೆ. ಈಗಾಗಲೇ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ವಿದ್ಯುತ್‌ನಿಂದ ಗೃಹಜ್ಯೋತಿ, ಈ ಹಿಂದಿನಂತೆ ಅನ್ನಭಾಗ್ಯ ಸೇರಿದಂತೆ ಎಲ್ಲ ಭರವಸೆಗಳನ್ನೂ ನೂರಕ್ಕೆ ನೂರರಷ್ಟು ಅನುಷ್ಠಾನಕ್ಕೆ ತರಲಾಗುವುದು. ಈ ಕುರಿತು ಮತದಾರರಿಗೆ ಅರಿವು ಮೂಡಿಸಿ, ಅವರ ಬೆಂಬಲ ಪಡೆದುಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.


ಕಾಂಗ್ರೆಸ್ ನಗರ ಒಬಿಸಿ ಅಧ್ಯಕ್ಷರಾಗಿ ಎನ್.ಆರ್.ನಾಗೇಶ್ ಮತ್ತು ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಹರೀಶ್‌ಗೌಡ, ಕೆ.ಎಸ್.ಶಿವರಾಮ್, ಶಿವಣ್ಣ ಇನ್ನಿತರರು ಇದ್ದರು.