ಚಿತ್ರದುರ್ಗ: ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಸ್ಪರ್ಧಿಸಿ ನಾಯಕರಾಗಿ ಬೆಳೆಯಬೇಕು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ಗೌಡ ಪಕ್ಷದ ಯುವ ಘಟಕದ ಸದಸ್ಯರಿಗೆ ಸಲಹೆ ನೀಡಿದರು.
ಜಿಲ್ಲಾ ಯುವ ಕಾಂಗ್ರೆಸ್ ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಸೋಲು-ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ, ಧೈರ್ಯದಿಂದ ಕಣಕ್ಕೆ ಇಳಿದು ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವಂತೆ ಯುವ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಯುವ ಜನರಿಗೆ ಪಕ್ಷದಲ್ಲಿ ಆದ್ಯತೆ ನೀಡಿದ್ದಾರೆ. ಬ್ಲಾಕ್, ಬೂತ್ ಮಟ್ಟಗಳಲ್ಲಿ ಯೂತ್ ಕಾಂಗ್ರೆಸ್ ಸಂಘಟಿಸಬೇಕು. 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳಿಂದ 44 ಸಾವಿರ ಕೋಟಿ ರೂ. ಬಡವರ ಮನೆಗಳಿಗೆ ತಲುಪಿದೆ ಎಂದರು.
ಸಂವಿಧಾನ ಬದಲಾಯಿಸುವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿ ಅವರನ್ನು ದೂರವಿಡುವ ಬಿಜೆಪಿ,ಆರ್‌ಎಸ್‌ಎಸ್‌ನವರ ಹುನ್ನಾರ ಸಹಿಸಲಾಗದು. ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಬಿಜೆಪಿ ಸಾಮಾಜಿಕ ಸಾಮರಸ್ಯ ಕೆಡಿಸುತ್ತಿದೆ. ಇದರ ವಿರುದ್ಧ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕರ್ನಾಟಕ ಉಸ್ತುವಾರಿ ನಿಗಮ್‌ಭಂಡಾರಿ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳನ್ನು ಯುವ ಕಾರ್ಯಕರ್ತರು ಪ್ರತಿ ಮನೆ, ಮನೆಗೆ ತಲುಪಿಸಬೇಕು. ಶೋಷಿತರು, ರೈತರು, ಮಹಿಳೆಯರ ಪರ ನಿಲ್ಲಬೇಕು. ಪ್ರಧಾನಿ ನರೇಂದ್ರಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಯುವ ಜನರನ್ನು ವಂಚಿಸಿದ್ದಾರೆ. ಭರವಸೆಗಳನ್ನು ಈಡೇರಿಸದ ಕೇಂದ್ರದ ತಪ್ಪು ನಿರ್ಧಾರಗಳನ್ನು ಜನರಿಗೆ ಮನ ವರಿಕೆ ಮಾಡಿಕೊಡಬೇಕೆಂದರು.
ಜಿಲ್ಲಾ ಯುವ ಕಾಂಗ್ರೆಸ್‌ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವುದಾಗಿ ಹೇಳಿದರು. ನಿಗಮ ಮಂಡಳಿಗಳ ನೇಮಕದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿದರು. ಯುವ ಘಟಕದ ಉಸ್ತುವಾರಿ ನಜ್ಮಾ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಎನ್.ಡಿ. ಕುಮಾರ್, ದಾದಾಪೀರ್, ಬಾಹುಬಲಿ, ಸಂದೀಪ್, ಶ್ರೀಧರ್, ದೀಪಕ್, ದಾದಾಪೀರ್, ವೈಶಾಕ್‌ಯಾದವ್, ಕುಮಾರ್, ಸಂದೀಪ್, ಆದರ್ಶ, ಅಭಿಲಾಶ್, ಗಿರೀಶ್, ಧನಂಜಯ, ವೀರೇಶ್, ಪವನ್ ಇತರರಿದ್ದರು.
ಸಭೆಗೂ ಮುನ್ನ ನಗರದ ಚಳ್ಳಕೆರೆ ಗೇಟ್‌ನಲ್ಲಿ ದ್ವಿಚಕ್ರ ವಾಹನಗಳೊಂದಿಗೆ ಮಂಜುನಾಥ ಗೌಡರನ್ನು ಸ್ವಾಗತಿಸಲಾಯಿತು. ಬಳಿಕ ಅವರು, ಇತರ ಪ್ರಮುಖರು ಮದಕರಿನಾಯಕ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಒನಕೆ ಓಬವ್ವ ಪ್ರತಿಮೆಗಳಿಗೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.