ವಿಜಯವಾಣಿ ಸುದ್ದಿಜಾಲ ಜಡಿಗೇನಹಳ್ಳಿ
ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಚುನಾವಣೆ ಹೆಸರಲ್ಲಿ ಯಾರೂ ಪರಸ್ಪರ ವೈರತ್ವ ಕಟ್ಟಿಕೊಳ್ಳಬಾರದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ
ನಾಗರಾಜ್ ಮನವಿ ಮಾಡಿದರು.
ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿಯ ಪೂಜಾರಾಮನಹಳ್ಳಿ ಗ್ರಾಮದಲ್ಲಿ 5054 ವಿಶೇಷ ಅನುದಾನದಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇದು ಚುನಾವಣಾ ವರ್ಷ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿ ಕೆಲಸಗಳಾಗಿವೆ, ಮುಂದೆ ಇನ್ಯಾವ ಕೆಲಸಗಳು ಆಗಬೇಕು ಎಂಬ ಬಗ್ಗೆ ವಿಚಾರ ಮಾಡಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಮತದಾರರಿಗೆ ಬಿಟ್ಟ ವಿಚಾರ. ಆದರೆ ಚುನಾವಣೆ ಹೆಸರಿನಲ್ಲಿ ಯಾರೂ ಗದ್ದಲ, ಗಲಾಟೆಯಂಥ ಸನ್ನಿವೇಶಗಳಿಗೆ ಅವಕಾಶ ಮಾಡಿಕೊಡಬಾರದು. ಚುನಾವಣೆ ವೇಳೆ ನಿಮ್ಮಿಷ್ಟದ ಅಭ್ಯರ್ಥಿಗೆ ಮತದಾನ ಮಾಡಿ, ಫಲಿತಾಂಶದ ಬಳಿಕ ಆಯ್ಕೆಯಾದ ಅಭ್ಯರ್ಥಿ ನಿಮ್ಮ ಸೇವೆ ಮಾಡುವ ಕರ್ತವ್ಯ ನಿರ್ವಹಿಸುತ್ತಾರೆ ಎಂದರು. ಚುನಾವಣೆ ಹೊಸ್ತಿಲಲ್ಲಿ ಮನಸ್ತಾಪ ಮಾಡಿಕೊಳ್ಳುವುದು, ಒಬ್ಬರು ಇನ್ನೊಬ್ಬರ ಬಗ್ಗೆ ಹಗೆ ಸಾಧಿಸುವ ಮೂಲಕ ಶಾಂತಿ ವಾತಾವರಣ ಕದಡುವ ಕೆಲಸ ಮಾಡುವುದು ಸರಿಯಲ್ಲ ಎಂದರು.ಅಭಿವೃದ್ಧಿ ತೋರಿಸಿ ಮತ ಕೇಳಬೇಕು: ಯಾವುದೆ ಪಕ್ಷದ ಅಭ್ಯರ್ಥಿಯಾದರೂ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಆ ಸರ್ಕಾರ ಇದ್ದಾಗ ಯಾವ್ಯಾವ ಯೋಜನೆ ಜಾರಿಗೊಳಿಸಿದ್ದಾರೆ ಎಂಬುದನ್ನು ಮತದಾರರ ಮುಂದೆ ಇಟ್ಟು ಮತ ಕೇಳಬೇಕು. ಅದು ಬಿಟ್ಟು ವಿನಾಕಾರಣ ಕಾಲೆಳೆಯುವ ಕೆಲಸ ಮಾಡುವುದು ಶೋಭೆ ತರುವಂತಹದ್ದಲ್ಲ. ಮತದಾರರು ಪ್ರಜ್ಞಾವಂತರಿದ್ದಾರೆ. ಕೇವಲ ಪೊಳ್ಳು ಭರವಸೆ ಮೊಸಳೆ ಕಣ್ಣೀರಿಗೆ ಮಣೆ ಹಾಕುವುದಿಲ್ಲ ಎಂದು ಸಚಿವರು ಹೇಳಿದರು.
ಬಿಜೆಪಿಯಿಂದ ಗ್ರಾಮೀಣಾಭಿವೃದ್ಧಿ: ಬಿಜೆಪಿ ಆಡಳಿತದ ಕಡೇ ಅವಧಿಯಲ್ಲಿ ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಮುಖವಾಗಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಇಂಥ ಯೋಜನೆಗಳು ಸಕಾಲದಲ್ಲಿ ಜಾರಿಯಾಗಲು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆ ಇದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಎಂಟಿಬಿ ವಿಶ್ವಾಸ ವ್ಯಕ್ತಪಡಿಸಿದರು.
ಪಂಚ ಗ್ರಾಮಗಳಲ್ಲಿ ಪೂಜೆ: ಪೂಜಾರಾಮನಹಳ್ಳಿ, ಚಿಕ್ಕನಲ್ಲಾಳ,ಅಪ್ಪಸಂದ್ರ, ಆಲಗೊಂಡನಹಳ್ಳಿ, ಬೆಳಮಂಗಲ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಕಾರ್ಯಕರ್ತರ ಬೈಕ್ ಏರಿದ ಸಚಿವರು ಗ್ರಾಮದಲ್ಲಿನ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.