ಜಿಲ್ಲೆ

ಚುನಾವಣೆ ಸಿದ್ಧತಾ ಕಾರ್ಯ ಚುರುಕು: ಅಂತಿಮ ಮತದಾರರ ಪಟ್ಟಿ ಸಿದ್ಧ.

ಹಾಸನ: 610 ಶತಾಯುಷಿಗಳು, 10031 ನವ ಮತದಾರರು
ವಿಧನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿರುವಂತೆ ಜಿಲ್ಲಾಡಳಿತ ಸಹ ಚುನಾವಣಾ ಆಯೋಗದ ಸೂಚನೆಯಂತೆ ವಿವಿಧ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೊದಲ ಹಂತವಾಗಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಈಗಾಗಲೇ ಬಿಡುಗಡೆ ಮಾಡಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 14,52,033 ಮಂದಿ ಮತದಾರರಿದ್ದಾರೆ. ಇವರಲ್ಲಿ 7,28,216 ಪುರುಷರು ಹಾಗೂ 7,23,778 ಮಹಿಳಾ ಮತದಾರರಿದ್ದು, 39 ಮಂದಿ ತೃತೀಯ ಲಿಂಗಿಗಳಿದ್ದಾರೆ.
ಮತದಾನದ ಪಟ್ಟಿ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿದ್ದವರು, ನಿಧನರಾದವರು ಮತ್ತು ಹೊರ ಜಿಲ್ಲೆಗೆ ಸ್ಥಳಾಂತರಗೊಂಡಿದ್ದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ರೀತಿ ಕೈಬಿಡಲಾದ ಮತದಾರರ ಒಟ್ಟು ಸಂಖ್ಯೆ 28,857. ಹೊಸದಾಗಿ 13,406 ಮಂದಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.

610 ಮಂದಿ ಶತಾಯುಷಿ ಮತದಾರರು:
ವಿಶೇಷ ಎಂದರೆ ಜಿಲ್ಲೆಯಲ್ಲಿ ನೂರು ವರ್ಷ ತುಂಬಿರುವ 610 ಮತದಾರರಿರುವುದು. ಈ ಪೈಕಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 132 ಮಂದಿ ಶತಾಯುಷಿ ಮತದಾರರಿದ್ದರೆ, ಬೇಲೂರಿನಲ್ಲಿ ಅತಿ ಕಡಿಮೆ 62 ಮಂದಿ ಶತಾಯುಷಿಗಳಿದ್ದಾರೆ. ಹೊಳೆನರಸೀಪುರ ಕ್ಷೇತ್ರದಲ್ಲಿ 107, ಹಾಸನದಲ್ಲಿ 91, ಸಕಲೇಶಪುರ 80, ಶ್ರವಣಬೆಳಗೊಳ 71 ಮತ್ತು ಅರಸೀಕೆರೆ ಕ್ಷೇತ್ರದಲ್ಲಿ 67 ಶತಾಯುಷಿ ಮತದಾರರಿದ್ದಾರೆ.

90 ದಾಟಿದವರ ಸಂಖ್ಯಯೂ ಹೆಚ್ಚು:
ಜಿಲ್ಲೆಯಲ್ಲಿ 90 ರಿಂದ 99 ವರ್ಷ ವಯಸ್ಸಿನ ಮತದಾರರ ಸಂಖ್ಯೆ 6881. ಇಲ್ಲೂ ಅರಕಲಗೂಡು ಕ್ಷೇತ್ರದ್ದೇ ಮೇಲುಗೈ. ಅಕಲಗೂಡು 90 ರಿಂದ 99 ವಯಸ್ಸಿನ 1350 ಮತದಾರರಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 770 ಮತದಾರರಿದ್ದಾರೆ. ಉಳಿದಂತೆ ಹೊಳೆನರಸೀಪುರ 1278, ಹಾಸನ 908, ಸಕಲೇಶಪುರ 904, ಅರಸೀಕೆರೆ 857 ಮತ್ತು ಶ್ರವಣಬೆಳಗೊಳ ಕ್ಷೇತ್ರದಲ್ಲಿ 90 ರಿಂದ 99 ವಯಸ್ಸಿನ 814 ಮತದಾರರಿದ್ದಾರೆ.

10,031 ನವ ಮತದಾರರು:
18 ವರ್ಷ ತುಂಬಿದ ನವ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಚುರುಕುಗೊಳಿಸಿದೆ. ಜಿಲ್ಲೆಯಲ್ಲಿ ಇದುವರೆಗೆ 18 ವರ್ಷ ತುಂಬಿದ 10031 ಮಂದಿ ನವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. 18 ವರ್ಷ ತುಂಬಿದವರ ಸಂಖ್ಯೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಇದ್ದು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದವರನ್ನು ಗುರುತಿಸಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಅವರು ಜಿಲ್ಲೆಯ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪಟ್ಟಿ
ವಿಧಾನಸಭಾ ಕ್ಷೇತ್ರ - 90 ರಿಂದ 99ರ ನಡುವಿನ ಮತದಾರರ ಸಂಖ್ಯೆ
ಅಕಲಗೂಡು - 1350
ಹೊಳೆನರಸೀಪುರ - 1278
ಹಾಸನ - 0908
ಸಕಲೇಶಪುರ - 0904
ಅರಸೀಕೆರೆ - 0857
ಶ್ರವಣಬೆಳಗೊಳ - 0814
ಬೇಲೂರು - 0770
ಒಟ್ಟು - 6881

ವಿಧಾನಸಭಾ ಕ್ಷೇತ್ರ - ಶತಾಯುಷಿ ಮತದಾರರು
ಅರಕಲಗೂಡು - 132
ಹೊಳೆನರಸೀಪುರ - 107
ಹಾಸನ - 091
ಸಕಲೇಶಪುರ - 080
ಶ್ರವಣಬೆಳಗೊಳ - 071
ಅರಸೀಕೆರೆ - 067
ಬೇಲೂರು - 062
ಒಟ್ಟು - 610