ಮೈಸೂರು: ಚಾಮರಾಜ ಕ್ಷೇತ್ರದಲ್ಲಿ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದು, ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ನಿರಾಶೆಗೊಳ್ಳುವುದಿಲ್ಲ. ಇನ್ನು ಹಲವು ಅವಕಾಶಗಳಿದ್ದು, ಮುಂದೆ ಎಂಪಿ ಚುನಾವಣೆ ಕೂಡ ಇದೆ ಎನ್ನುವ ಮೂಲಕ ಮಾಜಿ ಶಾಸಕ ವಾಸು ಅವರು ಪರೋಕ್ಷವಾಗಿ ಲೋಕಸಭೆ ಚುನಾವಣೆ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದರು.
ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ. ಪಕ್ಷದಿಂದ ನನಗೆ ಅನ್ಯಾಯ ಆಗಿಲ್ಲ. ಆಗುವುದಿಲ್ಲವೆಂದು ಭಾವಿಸಿದ್ದೇನೆ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ರಾಜಕೀಯಕ್ಕೆ ಬಂದ ಹೊಸದರಲ್ಲಿ ಆವೇಶ ಸಹಜವಾಗಿರುತ್ತದೆ. ಆದರೆ, ವಾಸ್ತವತೆ ಅರಿವು ನನಗಿದ್ದು, ನಾನು ಅಂತಹ ರೋಷ ಆವೇಶಕ್ಕಿಳಿಯುವುದಿಲ್ಲ. ನನ್ನ ಮಗ ಕವೀಶ್‌ಗೌಡ ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾನೆ. ಇನ್ನೊಬ್ಬ ಮಗ ರಿತೇಶ್‌ಗೌಡ ರಾಜಕೀಯ ಸೇರುವ ಬಗ್ಗೆ ಆಸಕ್ತಿ ಹೊಂದಿದ್ದಾನೆ. ಬೇರೆ ಮನೆಗಳಂತೆ ಅಪ್ಪ ಒಂದು ಪಕ್ಷ, ಮಗ ಒಂದು ಪಕ್ಷ ಎಂಬುದು ನಮ್ಮ ಕುಟುಂಬದಲ್ಲಿ ಇಲ್ಲ. ಸದ್ಯ ನನಗೆ ಪೂರಕವಾಗಿ ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂದೆ ಅವರಿಷ್ಟದಂತೆ ಚುನಾವಣಾ ರಾಜಕೀಯಕ್ಕೆ ಬರುತ್ತಾರೆ. ಅದಕ್ಕೆ ನಾನೇನೂ ಹೇಳಲ್ಲ ಎಂದರು.