ಹಾಸನ : ವಿಶ್ವದಲ್ಲಿ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಜನರಿಂದ ಜನರಿಗೊಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಸರ್ಕಾರವಾಗಿದೆ. ಉತ್ತಮ ಸರ್ಕಾರ ರಚಿಸಲು 18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಹೇಳಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಪಂಚಾಯತ್, ಯುವಜನ ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಧಾನಸಭೆ ಚುನಾವಣೆಯ ಜಾಗೃತಿ ಸೈಕಲ್ ಜಾಥಕ್ಕೆ ಹಸಿರು ಭಾವುಟ ಪ್ರದರ್ಶಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶೇಕಡ ನೂರಕ್ಕೆ 50ರಷ್ಟು ಮತದಾನ ಮಾಡಿದರೆ ನಿಜವಾದ ತೀರ್ಪು ಆಗುವುದಿಲ್ಲ. ನೂರಕ್ಕೆ ನೂರರಷ್ಟು ಮತದಾನ ಮಾಡಿದರೆ ಅದು ನಿಜವಾದ ಪ್ರಜಾಪ್ರಭುತ್ವದ ತೀರ್ಪು ಆಗುತ್ತದೆ. ಯಾವುದೇ ಜಾತಿ, ಮತ ಮತ್ತು ಆಮಿಷಗಳಿಗೆ ಒಳಗಾಗದೇ ಸಮರ್ಥ ನಾಯಕನನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ನಗರಸಭೆ ಆಯುಕ್ತರಾದ ಪರಮೇಶ್ವರಪ್ಪ ಮಾತನಾಡಿ, ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 68ರಷ್ಟು ಮತದಾನ ಆಗಿದೆ. ಅದರಲ್ಲೂ ಹಾಸನ ನಗರದ ಸುಮಾರು 89 ಮತಗಟ್ಟೆಗಳಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ಆಗಿದೆ. ಈ ಹಿನ್ನಲೆಯಲ್ಲಿ ಜಾಗೃತಿ ಮೂಡಿಸಲು ಈ ಸೈಕಲ್ ಜಾಥ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕೆಂದರೆ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು. ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪರಪ್ಪಸ್ವಾಮಿ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.