ಜಿಲ್ಲೆ

ಚುನಾವಣೆ ಘೋಷಣೆ ನಂತರ ಬಿಜೆಪಿ ಪಟ್ಟಿ

After Election anouncement

ಹುಬ್ಬಳ್ಳಿ : ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ನಮ್ಮ ಪಕ್ಷದಲ್ಲಿ ಚುನಾವಣೆಗೆ ಮುಂಚೆ ಟಿಕೆಟ್ ಘೋಷಣೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಹಾಲಿ ಶಾಸಕರಿಗೆ ಟಿಕೆಟ್ ತಪು್ಪವ ಸಾಧ್ಯತೆ ಇದೆ ಎಂಬ ವದಂತಿ ಏಕೆ ಹಬ್ಬಿತು ಗೊತ್ತಿಲ್ಲ ಎಂದರು.

ವಯಸ್ಸು, ಗೆಲ್ಲುವ ಮಾನದಂಡ ಮತ್ತಿತರ ಕಾರಣಗಳಿಂದ ಬೆರಳೆಣಿಕೆ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಬಹುದಷ್ಟೇ. ಇನ್ನೂ ಕೆಲ ಶಾಸಕರು ಚುನಾವಣೆ ಕಣದಿಂದ ಸ್ವಯಂ ಪ್ರೇರಿತವಾಗಿ ಹಿಂದೆ ಸರಿದಿರಬಹುದು ಎಂದು ಹೇಳಿದರು.

ಒಳ ಮೀಸಲಾತಿ ವಿರೋಧಿಸಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಯಬಾರದಿತ್ತು. ತಪು್ಪ ಗ್ರಹಿಕೆಯಿಂದ ಇದು ನಡೆದಿರುವ ಸಾಧ್ಯತೆ ಇದೆ. ಒಳ ಮೀಸಲಾತಿಗೆ ರಚಿಸಿದ್ದ ಉಪ ಸಮಿತಿಯು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮೀಸಲಾತಿ ಪ್ರಕ್ರಿಯೆ ಮಾಡಿದೆ. ಒಳ ಮೀಸಲಾತಿಗೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಆದರೆ, ಕಾಂಗ್ರೆಸ್ ಈ ಘಟನೆಯಲ್ಲಿಯೂ ರಾಜಕೀಯ ಮಾಡಲು ಹೊರಟಿದೆ ಎಂದು ದೂರಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಲಾರ ಭೇಟಿಯಿಂದ ಯಾವುದೇ ಪರಿಣಾಮಗಳು ಆಗುವುದಿಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದಷ್ಟು ಕಾಂಗ್ರೆಸ್​ನ ಅವಸಾನಕ್ಕೆ ಕಾರಣವಾಗುತ್ತದೆ. ಅವರ ಭೇಟಿಯಿಂದ ಬಿಜೆಪಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.