ಜಿಲ್ಲೆ

ಚುನಾವಣೆ ಅಕ್ರಮ ತಡೆಯಲು ಕಟ್ಟುನಿಟ್ಟಿನ ನಿಗಾವಹಿಸಲು ಸೂಚನೆ

ಹಾಸನ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್.ಅವರು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಾಗ ಮಾಹಿತಿ ಖಾತರಿಸಿಕೊಂಡು ಕ್ರಮ ಕೈಗೋಳಬೇಕು ಮತ್ತು ಚುನಾವಣೆ ಕಾರ್ಯವನ್ನು ಚೆಕ್ ಲಿಸ್ಟ್ ಪ್ರಕಾರವೇ ನಿರ್ವಹಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಮತದಾರರ ಪಟ್ಟಿಯಲ್ಲಿ ಕ್ರಮಸಂಖ್ಯೆ ಸರಿಯಾಗಿದೆ ಒಮ್ಮೆ ಪರಿಶೀಲಿಸಿ ದೃಢೀಕರಣ ಮಾಡುವಂತೆ ತಿಳಿಸಿದರಲ್ಲದೆ, ಮತಗಟ್ಟೆಗಳಲ್ಲಿ ಮತದಾರರಿಗೆ ಕುಡಿಯುವ ನೀರು ಒದಗಿಸಲು ಕ್ರಮವಹಿಸಬೇಕು, ಮತದಾನ ಮಾಡಲು ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಸರತಿ ಸಾಲಿನಲ್ಲಿ ಸಾಗಲು ಹಾಗೂ ಅಗತ್ಯವಿರುವವರಿಗೆ ವೀಲ್‌ಚೇರ್ ಬಳಸುವ ನಿಟ್ಟಿನಲ್ಲಿ ವೀಲ್‌ಚೇರ್ ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.

ಮತಗಟ್ಟೆಗಳಲ್ಲಿ ಜನರು ಮತದಾನ ಮಾಡಲು ಸರತಿ ಸಾಲಿನಲ್ಲಿ ಸಾಗಲು ಅನುಕೂಲವಾಗುವಂತೆ ನೆರಳು ಇಲ್ಲದಿದ್ದರೆ ಶಾಮಿಯಾನ ಹಾಕಿಸಬೇಕು ಇದರ ಬಗ್ಗೆ ಗಮನಹರಿಸಿ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ವೆಬ್‌ಕಾಸ್ಟಿಂಗ್ ಅನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಬೂತ್‌ಗಳಲ್ಲಿ ಹಾಕಲು ನೆಟ್ ವರ್ಕ್ ಇದೆಯಾ ಎಂದು ಪರಿಶೀಲಿಸಿ,80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರಿಗೆ ಅಂಚೆ ಮತಪತ್ರ ಚಲಾವಣೆಗೆ ಎರಡು ದಿನದಲ್ಲಿ ಪೂರ್ಣಗೊಳಿಸಲು ರೂಟ್ ಮ್ಯಾಪ್ ಸಿದ್ದತೆ ಮಾಡಿಕೊಳ್ಳಿ ಹೋದಾಗ ಅವರು ಇಲ್ಲದಿದ್ದರೆ ಪಂಚನಾಮೆ ಮಾಡುವಂತೆ ಸೂಚಿಸಿದರು. ಏ.29 ಮತ್ತು 30 ರಂದು ಮೊದಲ ಸುತ್ತು ಮೇ.2 ರಂದು ಎರಡನೆ ಸುತ್ತಿನಲ್ಲಿ ನಡೆಸಿ ಬೆಳಿಗ್ಗೆ 7ಕ್ಕೆ ಪ್ರಾರಂಭಿಸಿ ಸಂಜೆ 6 ಗಂಟೆವಯರೆಗೂ ಮತದಾನಕ್ಕೆ ಅವಕಾಶ ಮಾಡಿ ಕೊಡಿ ಹಾಗೂ ಅವರು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯವಿರುವ ವಾಹನಗಳ ಬಗ್ಗೆ ಮಾಹಿತಿ ನೀಡುವಂತೆ ಹೇಳಿದರು.

ಅಗತ್ಯ ಸೇವೆಯಲ್ಲಿರುವ ಮತದಾರರು ಅಂಚೆ ಮತಪತ್ರ ಚಲಾವಣೆಗೆ ಮೇ.2 ರಿಂದ 6 ವರೆಗೆ ಅವಕಾಶ ಕಲ್ಪಿಸಲಾಗಿದೆ ನಿಗದಿತ ಸಮಯದಲ್ಲಿ ಮತಚಲಾಯಿಸುವಂತೆ ತಿಳಿಸಿದರು.

ಜಿಲ್ಲಾ ನೋಡಲ್ ಅಧಿಕಾರಿ ಎ.ಡಿ.ಐ.ಟಿ ಆದಾಯ ತೆರಿಗೆ ಇಲಾಖೆ ವಿನಯ್ ಅವರು ಮಾತನಾಡಿ ಅಕ್ರಮ ಹಣ ಸಾಗಾಟದ ಬಗ್ಗೆ ನಿಗಾವಹಿಸಿ ಎಂದರಲ್ಲದೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ, ದಾಳಿ ಸ್ವರೂಪ, ಚುನಾವಣಾ ಅಕ್ರಮ ತಡೆಯಲು ಅನುಸರಿಸುವ ಕ್ರಮಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಎನ್.ಆನಂದ್, ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸಭೆ ಯಲ್ಲಿ ಹಾಜರಿದ್ದರು.